SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಟ್ರಾಫಿಕ್ ಸಮಸ್ಯೆ: ಹೆಬ್ಬಾಳದಲ್ಲಿ ನೂತನ ಸುರಂಗ ರಸ್ತೆ

ಬೆಂಗಳೂರು ಟ್ರಾಫಿಕ್ ಸಮಸ್ಯೆ: ಹೆಬ್ಬಾಳದಲ್ಲಿ ನೂತನ ಸುರಂಗ ರಸ್ತೆ

0
75

ಬೆಂಗಳೂರು ಸಂಚಾರ ದಟ್ಟಣೆ ಇಳಿಕೆಗೆ ರಾಜ್ಯ ಸರ್ಕಾರದ ಮಹತ್ವದ ಯೋಜನೆ, ಹೆಬ್ಬಾಳ-ಯುಎಎಸ್ ಸಂಪರ್ಕಕ್ಕೆ ಅವಳಿ ಸುರಂಗ ಮಾರ್ಗ – 2.2 ಕಿ.ಮೀ ಉದ್ದದ ಟೋಲ್ ಫ್ರೀ ಸುರಂಗ ರಸ್ತೆ ನಿರ್ಮಾಣಕ್ಕೆ ಚಾಲನೆ

ಬೆಂಗಳೂರು: ಮಹಾನಗರ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಾಣವಾಗಲಿರುವ 2.2 ಕಿಲೋಮೀಟರ್ ಉದ್ದದ ನೂತನ ತ್ರಿ-ಲೇನ್ ಅವಳಿ ಸುರಂಗ ರಸ್ತೆ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಹೆಬ್ಬಾಳ ಫ್ಲೈಓವರ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿಗೃಹದವರೆಗೆ ಸಂಪರ್ಕ ಕಲ್ಪಿಸಲಿರುವ ಈ ಅವಳಿ ಸುರಂಗ ಮಾರ್ಗವು ನಗರದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬೆಂಗಳೂರು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ನಗರದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಾಗಿದೆ. ಈ ಸುರಂಗ ಮಾರ್ಗ ಯೋಜನೆಯಿಂದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದ್ದು, ಜನರಿಗೆ ತ್ವರಿತ ಹಾಗೂ ತಡೆರಹಿತ ಸಂಚಾರ ಸೌಲಭ್ಯ ದೊರೆಯಲಿದೆ” ಎಂದು ಹೇಳಿದರು.

ಈ ಸುರಂಗ ರಸ್ತೆ ಸಂಪೂರ್ಣವಾಗಿ ಟೋಲ್ ಫ್ರೀ ಆಗಿರಲಿದ್ದು, ಸಾರ್ವಜನಿಕರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆಯ ಜವಾಬ್ದಾರಿಯನ್ನು ಹೊತ್ತಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: BDA ಹಸಿರು ಅಭಿಯಾನಕ್ಕೆ ಗಿನ್ನಿಸ್ ವಿಶ್ವ ದಾಖಲೆ ಗೌರವ: ಡಿಕೆಶಿ ಸಂತಸ

ಈ ಯೋಜನೆಯು ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೆಬ್ಬಾಳ ಮತ್ತು ಕೆ.ಆರ್. ಪುರಂ ಭಾಗಗಳಿಗೆ ಸಂಚಾರ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿದೆ. ನಗರದ ಉತ್ತರ ಮತ್ತು ಪೂರ್ವ ಭಾಗಗಳ ನಡುವೆ ಸಂಚಾರ ಸಮಯವನ್ನು ಕಡಿಮೆ ಮಾಡುವಲ್ಲಿಯೂ ಈ ಯೋಜನೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.