SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿ 3 ಉದ್ಯಾನ ನಿರ್ಮಾಣಕ್ಕೆ ಚಿಂತನೆ

ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿ 3 ಉದ್ಯಾನ ನಿರ್ಮಾಣಕ್ಕೆ ಚಿಂತನೆ

0
16

ಬೆಂಗಳೂರು: “ಬೆಂಗಳೂರಿನಲ್ಲಿ ಲಾಲ್‌ಬಾಗ್‌ ಮಾದರಿಯ 3 ಉದ್ಯಾನ ನಿರ್ಮಾಣ ಮಾಡಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ ʻಗಂಗ ಸಾಮ್ರಾಜ್ಯ ವೈಭವʼ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ಇಂತಹ ಉದ್ಯಾನ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಭೂಮಿ ರಕ್ಷಣಾ ಇಲಾಖೆ ವಶದಲ್ಲೇ ಇರುತ್ತದೆ. ಆದರೆ ಅಲ್ಲಿ ಇಂತಹ ಉದ್ಯಾನ ನಿರ್ಮಿಸಲು ಅನುಮತಿ ಬೇಕು ಎಂದು ಪತ್ರ ಬರೆದಿದ್ದು, ಸದ್ಯದಲ್ಲೇ ರಕ್ಷಣಾ ಸಚಿವರನ್ನು ಭೇಟಿ ಮಾಡುತ್ತೇನೆ. ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಿಸಲು ಪ್ರಧಾನಮಂತ್ರಿಗಳು ಅನುಮತಿ ನೀಡಿದ್ದಾರೆ” ಎಂದರು.

“ಇದರ ಜೊತೆಗೆ ಬೆಂಗಳೂರು ನಗರದೊಳಗೆ ಇರುವ ಅರಣ್ಯ ಜಾಗದಲ್ಲಿ ಇಂತಹ ಉದ್ಯಾನವನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ನಿರ್ಮಿಸಲು ಆಲೋಚಿಸಿದ್ದೇವೆ. ನಮ್ಮ ಕಾಲದಲ್ಲಿ ನಗರದ ಹಸಿರು ಕಾಪಾಡಿ, ಸಾರ್ವಜನಿಕರ ಬದುಕಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಿ: “ಲಾಲ್‌ಬಾಗ್ ಕೇವಲ ಉದ್ಯಾನವನ ಮಾತ್ರವಲ್ಲ. ಇದೊಂದು ಇತಿಹಾಸ. ಗಂಗ ಸಾಮ್ರಾಜ್ಯದಲ್ಲಿ ಕೃಷಿಕರು, ರೈತರ ಇತಿಹಾಸವನ್ನು ಇಟ್ಟುಕೊಂಡು ಈ ಫಲಪುಷ್ಟ ಪ್ರದರ್ಶನವನ್ನು ರೂಪಿಸಲಾಗಿದೆ. ಗಂಗರು ಆಗಿನ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಇಂದಿಗೂ ಉಳಿದಿವೆ. ಕಷ್ಟಕಾಲದಲ್ಲಿ ಆ ಕೆರೆಗಳು ರಕ್ಷಣೆ ಮಾಡಿವೆ. ಗಂಗರ ಇತಿಹಾಸ ಸಮಾನತೆ, ಕೃಷಿಕರ ಬದುಕು, ಹೋರಾಟವನ್ನು ಹೊಂದಿದೆ. ಇದು ನಮ್ಮ ಸಂಸ್ಕೃತಿ, ರೈತರ ಬದುಕು ಹಾಗೂ ಕಲೆಯ ಸಂಭ್ರಮ. ಈ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ನಾಡಿನ ಜನತೆ ಈ ಫಲಪುಷ್ಟ ಪ್ರದರ್ಶನ ವೀಕ್ಷಿಸಿ ಆನಂದಿಸಬೇಕು. ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಈ ಕಾರ್ಯಕ್ರಮವನ್ನು ನಾನು ಉದ್ಘಾಟಿಸಿರುವುದು ಸಂತೋಷ ತಂದಿದೆ. 10 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಲಾಲ್‌ಬಾಗ್‌ ಅನ್ನು ಹೈದರಾಲಿ ಸ್ಥಾಪಿಸಿದರು, ಬ್ರಿಟೀಷರು ಅಭಿವೃದ್ಧಿ ಮಾಡಿದರು. ಈಗ ಕರ್ನಾಟಕ ಸರ್ಕಾರ ಮುಂದುವರಿಸುತ್ತಿದೆ” ಎಂದು ತಿಳಿಸಿದರು.

“ಈ ವರ್ಷ ಗಂಗ ಸಾಮ್ರಾಜ್ಯ ರೂಪುಗೊಂಡಿದೆ. ದಕ್ಷಿಣ ಭಾರತದ ಗಂಗರ ಸಾಮ್ರಾಜ್ಯದ ವೈಭವವನ್ನು ಪುಷ್ಪಗಳ ಮೂಲಕ ಮೂಡಿಸಲಾಗಿದೆ. ಅವರ ಹೋರಾಟ, ಸಂಸ್ಕೃತಿ ಎಲ್ಲವೂ ಇಲ್ಲಿ ಅನಾವರಣಗೊಂಡಿದೆ. ಗಂಗರ ಇತಿಹಾಸ ಕರ್ನಾಟಕ ರಾಜ್ಯದ ಇತಿಹಾಸದ ಭಾಗ. ತೋಟಗಾರಿಕಾ ಇಲಾಖೆಯವರು ಈ ಪರಿಕಲ್ಪನೆಯನ್ನು ಅತ್ಯುತ್ತಮವಾಗಿ ರೂಪಿಸಿದ್ದಾರೆ” ಎಂದು ಹೇಳಿದರು.

ರೈತರು, ಸರ್ಕಾರದ ಪಾಲುದಾರಿಕೆ ಕಾರ್ಯಕ್ರಮ ಪ್ರಕಟ: “ರಾಜ್ಯದಲ್ಲಿ ಹಸಿರು ಹೆಚ್ಚಿಸಿ ರೈತರ ಬದುಕು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಇದು ರೈತರು ಹಾಗೂ ಸರ್ಕಾರದ ನಡುವಿನ ಪಾಲುದಾರಿಕೆಯ ಕಾರ್ಯಕ್ರಮವಾಗಿದೆ. ಇದನ್ನು ಆಗಸ್ಟ್ 15ರಂದು ಪ್ರಕಟಿಸುತ್ತೇವೆ. ಸರ್ಕಾರದ 100 ದಿನಗಳ ಕಾರ್ಯಕ್ರಮ ರೂಪಿಸಲಾಗಿದ್ದು, ರೈತರ ಬದುಕಿಗೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಆಲೋಚಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದು ತಿಳಿಸಿದರು.