SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು

ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು

0
46

ಮಳೆ ಕೊರತೆ ಹಿನ್ನೆಲೆ ದಾವಣಗೆರೆಯಲ್ಲಿ ಎಡೆಜಾತ್ರೆ ಬಳಿಕ ದುಗ್ಗಮ್ಮ ದೇವಾಲಯದ ಮುಂದೆ ಭಾನುವಾರದ ಸಂತೆ ಆರಂಭ ಸುದೀರ್ಘ ಸಂಪ್ರದಾಯಕ್ಕೆ ಮತ್ತೆ ಚಾಲನೆ

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ದಾವಣಗೆರೆಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಾಲಯದ ಮುಂಭಾಗದಲ್ಲಿ ಭಾನುವಾರದ ಸಂತೆ ಆರಂಭಗೊಂಡಿದೆ. ವರುಣದೇವ ಕೃಪೆಗಾಗಿ ದೇವಿಯ ಮೊರೆ ಹೋಗುವ ದಾವಣಗೆರೆ ಜನರ ಸಾಂಪ್ರದಾಯಿಕ ಆಚರಣೆ ಮತ್ತೊಮ್ಮೆ ಆರಂಭವಾಗಿದ್ದು, ಭಕ್ತರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದ ಕಾರಣ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ರೈತರು ಮುಂಗಾರು ಬಿತ್ತನೆ ಕಾರ್ಯ ಆರಂಭಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕಳೆದ ವಾರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಎಡೆಜಾತ್ರೆ ನಡೆಸಿ, ಮಳೆ ಕರುಣಿಸುವಂತೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಮಾಡಲಾಗಿತ್ತು. ಆದರೆ, ಬಳಿಕವೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಮತ್ತೊಂದು ವಿಶೇಷ ಆಚರಣೆಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳ ಟ್ರಸ್ಟ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ, ಜೂನ್ 28ರಿಂದ ಸತತ ಐದು ಭಾನುವಾರಗಳ ಕಾಲ ದೇವಸ್ಥಾನದ ಮುಂಭಾಗದಲ್ಲಿ ವಾರದ ಸಂತೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಭಾನುವಾರ ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಮತ್ತು ವ್ಯಾಪಾರಿಗಳು ದೇವಸ್ಥಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಾರ ಆರಂಭಿಸಿದರು. ದುರ್ಗಾಂಬಿಕಾ ದೇವಸ್ಥಾನದಿಂದ ದೊಡ್ಡಪೇಟೆ ಗಣೇಶ ದೇವಸ್ಥಾನವರೆಗೆ, ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆ (ಎಸ್‌ಕೆಪಿ ರಸ್ತೆ), ಮಕಾನ್ ರಸ್ತೆ, ಹಳೇಪೇಟೆ, ಬೀರಲಿಂಗೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ನಿಮಿಷಾಂಬಾ, ಮಾರ್ಕಾಂಡೇಶ್ವರ, ವೀರಭದ್ರೇಶ್ವರ ಹಾಗೂ ಅಂಜನೇಯ ದೇವಸ್ಥಾನಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂತೆ ಜೋರಾಗಿ ನಡೆಯಿತು.

ಇದನ್ನೂ ಓದಿ: BDA ಹಸಿರು ಅಭಿಯಾನಕ್ಕೆ ಗಿನ್ನಿಸ್ ವಿಶ್ವ ದಾಖಲೆ ಗೌರವ: ಡಿಕೆಶಿ ಸಂತಸ

ಸ್ಥಳೀಯರು ಹೇಳುವಂತೆ, ಮಳೆ ಕೊರತೆ ಉಂಟಾದಾಗ ದೇವಿಗೆ ಎಡೆಜಾತ್ರೆ ಮಾಡುವುದರ ಜೊತೆಗೆ ದೇವಸ್ಥಾನದ ಮುಂಭಾಗ ಸಂತೆ ನಡೆಸುವುದು ದಾವಣಗೆರೆಯ ಸುದೀರ್ಘ ಸಂಪ್ರದಾಯವಾಗಿದೆ. ಸಂತೆ ಆರಂಭವಾದ ದಿನವೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಶೀಘ್ರದಲ್ಲೇ ಉತ್ತಮ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.