
ಡಿಜಿಟಲ್ ಜ್ಯೋತಿಷ್ಯ ವೇದಿಕೆಯಾದ ಆಸ್ಟ್ರೋಟಾಕ್, $1 ಬಿಲಿಯನ್ ಮೌಲ್ಯಮಾಪನದೊಂದಿಗೆ ಯುನಿಕಾರ್ನ್ ಕ್ಲಬ್ ಅನ್ನು ಪ್ರವೇಶಿಸಿದೆ. – 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ESOP ಮರುಖರೀದಿ ಅವಕಾಶ
ನವದೆಹಲಿ: ಡಿಜಿಟಲ್ ಜ್ಯೋತಿಷ್ಯ ಸಲಹಾ ವೇದಿಕೆಯಾಗಿ ಆರಂಭಗೊಂಡು ಆಧ್ಯಾತ್ಮಿಕ ವಾಣಿಜ್ಯ ಕ್ಷೇತ್ರಕ್ಕೂ ವಿಸ್ತರಿಸಿರುವ AstroTalk, ತನ್ನ ಉದ್ಯೋಗಿಗಳಿಗೆ ಮಹತ್ವದ ಲಿಕ್ವಿಡಿಟಿ ಅವಕಾಶ ಕಲ್ಪಿಸಿದೆ. ವರದಿಗಳ ಪ್ರಕಾರ, 100ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ESOPಗಳ (Employee Stock Ownership/Option) ಒಂದು ಭಾಗವನ್ನು ಮಾರಾಟ ಮಾಡಿ ಕಂಪನಿಯ ಬೆಳವಣಿಗೆಯಿಂದ ಸೃಷ್ಟಿಯಾದ ಮೌಲ್ಯದ ಒಂದು ಭಾಗವನ್ನು ನಗದೀಕರಿಸಿಕೊಳ್ಳಲು ಅವಕಾಶ ಪಡೆದಿದ್ದಾರೆ.
ವಿಶೇಷವೆಂದರೆ, ಈ ಷೇರು ಮರುಖರೀದಿಗೆ ಹೊಸ ಬಾಹ್ಯ ಹೂಡಿಕೆ ಸುತ್ತಿನಿಂದ ಹಣ ಸಂಗ್ರಹಿಸಲಾಗುತ್ತಿಲ್ಲ. ಬದಲಾಗಿ AstroTalkನ ವ್ಯವಹಾರದಿಂದ ಬಂದ ಲಾಭದ ಮೂಲಕವೇ ಮರುಖರೀದಿ ನಡೆಯುತ್ತಿದೆ ಎಂದು ವರದಿಯಾಗಿದೆ.
2017ರಲ್ಲಿ ಪುನೀತ್ ಗುಪ್ತಾ ಮತ್ತು ಅನ್ಮೋಲ್ ಜೈನ್ ಸ್ಥಾಪಿಸಿದ AstroTalk, ಆರಂಭದಲ್ಲಿ ಗ್ರಾಹಕರನ್ನು ಜ್ಯೋತಿಷಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸುವ ವೇದಿಕೆಯಾಗಿತ್ತು. ಬಳಿಕ ರತ್ನದ ಕಲ್ಲುಗಳು, ರುದ್ರಾಕ್ಷಿ, ಬಳೆಗಳು ಸೇರಿದಂತೆ ವಿವಿಧ ಆಧ್ಯಾತ್ಮಿಕ ಉತ್ಪನ್ನಗಳ ಮಾರಾಟಕ್ಕಾಗಿ AstroTalk Store ಆರಂಭಿಸಿ ತನ್ನ ಆದಾಯ ಮೂಲಗಳನ್ನು ವಿಸ್ತರಿಸಿತು.
2025ರಲ್ಲಿ AstroTalk Store ₹140 ಕೋಟಿಗೂ ಹೆಚ್ಚು ಆದಾಯ ಗಳಿಸಿದ್ದು, 16 ಲಕ್ಷಕ್ಕೂ ಅಧಿಕ ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಿದೆ ಎಂದು ವರದಿಯಾಗಿದೆ.
ಕಂಪನಿಯ ಹಣಕಾಸು ಸಾಧನೆಯಲ್ಲೂ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. FY25ರಲ್ಲಿ ಕಾರ್ಯಾಚರಣೆಗಳಿಂದ ₹1,176 ಕೋಟಿ ಆದಾಯ ಗಳಿಸಿದ್ದು, ಹಿಂದಿನ ವರ್ಷದ ₹651 ಕೋಟಿಗೆ ಹೋಲಿಸಿದರೆ ಭಾರೀ ಏರಿಕೆಯಾಗಿದೆ. ತೆರಿಗೆಗೆ ಮುನ್ನದ ಲಾಭವೂ ₹127 ಕೋಟಿಯಿಂದ ₹285 ಕೋಟಿಗೆ ಏರಿಕೆಯಾಗಿದೆ.
ಇದರ ನಡುವೆ AstroTalkನ ಮೌಲ್ಯಮಾಪನವು 2024ರಲ್ಲಿ ವರದಿಯಾಗಿದ್ದ ಸುಮಾರು $300 ಮಿಲಿಯನ್‌ನಿಂದ ಈಗ ಸುಮಾರು $1 ಬಿಲಿಯನ್‌ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಉದ್ಯೋಗಿಗಳ ಪಾಲಿಗೆ ಈ ESOP ಮರುಖರೀದಿ ಮಹತ್ವದ್ದಾಗಿದ್ದು, IPO, ಕಂಪನಿ ಮಾರಾಟ ಅಥವಾ ಮತ್ತೊಂದು ಬಾಹ್ಯ ಹೂಡಿಕೆ ಸುತ್ತಿನವರೆಗೆ ಕಾಯದೆ ತಮ್ಮ ಷೇರುಗಳ ಒಂದು ಭಾಗವನ್ನು ನಗದೀಕರಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಕಂಪನಿಯ ಪಾಲಿಗೆ, ಲಾಭದಾಯಕತೆಯ ಹಂತದಲ್ಲೇ ಉದ್ಯೋಗಿಗಳಿಗೆ ಮೌಲ್ಯ ಹಂಚಿಕೆ ಮಾಡುತ್ತಿರುವುದು ಪ್ರಮುಖ ಬೆಳವಣಿಗೆಯಾಗಿದೆ.




















