SK Home Ad
Home ನಮ್ಮ ಜಿಲ್ಲೆ ಧಾರವಾಡ ಕರ್ನಾಟಕ ಬಂದ್ ಕರೆಗೆ ಬರೀ ನೈತಿಕ ಬೆಂಬಲ, ಇಂದು ಬಂದ್ ಇಲ್ಲ

ಕರ್ನಾಟಕ ಬಂದ್ ಕರೆಗೆ ಬರೀ ನೈತಿಕ ಬೆಂಬಲ, ಇಂದು ಬಂದ್ ಇಲ್ಲ

0
26

ಹುಬ್ಬಳ್ಳಿ-ಧಾರವಾಡ: ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಕರೆ ನೀಡಿರುವ ಆ. 13ರ ರಾಜ್ಯ ಬಂದ್‌ಗೆ, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿಲ್ಲ. ಕೇವಲ ನೈತಿಕ ಬೆಂಬಲವಷ್ಟೇ ನೀಡಲು ಮುಂದಾಗಿವೆ. ಸಾರಿಗೆ ಸಂಸ್ಥೆಯ ಬಸ್ ಸಂಚಾರ, ಆಟೋ ರಿಕ್ಷಾ ಸಂಚಾರ, ಸರಕು ವಾಹನ, ಶಾಲಾ ವಾಹನ ಸೇರಿದಂತೆ ಎಲ್ಲ ವಾಹನ ಸಂಚಾರ, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಎಂದಿನಂತೆಯೇ ನಮ್ಮ ಎಲ್ಲ ಬಸ್‌ಗಳ (ದೂರಮಾರ್ಗ, ನಗರ ಸಾರಿಗೆ ಸೇರಿ) ಸಂಚಾರ ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸಲಿವೆ. ಯಾವುದೇ ರೀತಿ ಬಸ್ ಸಂಚಾರ ಸ್ಥಗಿತದ ನಿರ್ಧಾರ ಪ್ರಕಟಿಸಿಲ್ಲ. ಎಂದಿನಂತೆ ಸಾರ್ವಜನಿಕ ಪ್ರಯಾಣಿಕರಿಗೆ ಸಂಸ್ಥೆಯ ಬಸ್ ಸೇವೆ ಇರಲಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಬಂದ್ ಕರೆಗೆ ನಮ್ಮ ನೈತಿಕ ಬೆಂಬಲವಿದೆ. ಆದರೆ, ಆಟೋ ಸಂಚಾರ ಬಂದ್ ಮಾಡಿ ಬೆಂಬಲಿಸುವುದಿಲ್ಲ. ನಮ್ಮ ಎಲ್ಲ ಆಟೋ ರಿಕ್ಷಾ ಸಂಚಾರ ಎಂದಿನಂತೆಯೇ ಸಾರ್ವಜನಿಕರ ಸೇವೆಗೆ ಮುಂದುವರಿಯಲಿದೆ ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದ್ದಾರೆ.

ಬರಗಾಲ ಇದೆ. ಜನ ದೈನಂದಿನ ಜೀವನ ನಡೆಸಲು ಕಷ್ಟವಿದೆ. ಬಂದ್ ಮಾಡಿದರೆ ತೊಂದರೆ. ಹೀಗಾಗಿ, ಬಂದ್ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ರೈತ, ಕನ್ನಡಪರ ಸಂಘಟನೆಗಳೂ ಬೆಂಬಲಿಸಿಲ್ಲ: ಬುಧವಾರ ನಗರದಲ್ಲಿ ಸಭೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ರಸ್ತೆ ತಡೆ, ಪ್ರತಿಭಟನೆ, ಸಮಾವೇಶ, ಮನವಿ ಪತ್ರ ಸಲ್ಲಿಕೆ ಸೇರಿದಂತೆ ಯಾವ ಕಾರ್ಯಕ್ರಮವೂ ನಡೆಸದೆ ತಟಸ್ಥವಾಗಿರಲು ತೀರ್ಮಾನಿಸಿವೆ. ವಿವಿಧ ಕನ್ನಡ ಸಂಘಟನೆಗಳು ಸಹ ಬಂದ್‌ನಿಂದ ದೂರ ಇರಲು ನಿರ್ಧರಿಸಿದ್ದಾರೆ.

ಮಹದಾಯಿ ಯೋಜನೆಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಬೆಂಬಲ ನೀಡುವಂತೆ ವಿನಂತಿಸಿದರೂ, ಅಲ್ಲಿಯ ಯಾವ ಸಂಘಟನೆಗಳು ಸ್ಪಂದಿಸುತ್ತಿಲ್ಲ. ವಾಟಾಳ್ ನಾಗರಾಜ್ ಅವರು ಹುಬ್ಬಳ್ಳಿಗೆ ಬಂದು ಸಭೆ ನಡೆಸುವಾಗಲೂ, ಸ್ಥಳೀಯ ಸಂಘಟಕರನ್ನು ಆಹ್ವಾನಿಸಿಲ್ಲ. ಹೀಗಾಗಿ ನಾವು ಗುರುವಾರ ಬಂದ್‌ಗೆ ಬೆಂಬಲ ನೀಡುತ್ತಿಲ್ಲ ಎಂದು ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದು ತೇಜಿ ತಿಳಿಸಿದ್ದಾರೆ.

ಬಂದ್ ಕರೆಗೂ ಮುನ್ನ ಈ ಭಾಗದ ಸಂಘಟನೆಗಳ ಅಭಿಪ್ರಾಯ ಕೇಳಿಲ್ಲ. ಬೆಂಗಳೂರಿನಲ್ಲಿ ಕೂತು ಬಂದ್ ಕರೆ ನಿಡಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಈ ಭಾಗದ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುತ್ತಿಲ್ಲ ಎಂದು ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷ ಸಂಜೀವ ದುಮ್ಮಕನಾಳ ಹೇಳಿದ್ದಾರೆ.

ಬಂದ್‌ಗೆ ಧಾರವಾಡ ದಲಾಲ ವರ್ತಕರ ಬೆಂಬಲವಿಲ್ಲ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರದ ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ ಎಂದು ಧಾರವಾಡ ದಲಾಲ ಮತ್ತು ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡಲು ಸಾಧ್ಯವಿರದ ಸ್ಥಿತಿಯಲ್ಲಿಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಅನಾನುಕೂಲ ಆದೇಶ ನೀಡುತ್ತಿರುವುದು ದುರದೃಷ್ಟಕರ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ನೀರು ಹರಿಸುವುದನ್ನು ವಿರೋಧಿಸಿ ಹಲವಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕಾವೇರಿ ವಿಷಯದಲ್ಲಿನ ಎಲ್ಲ ಹೋರಾಟಗಳಿಗೆ ಧಾರವಾಡ ದಲಾಲ ಮತ್ತು ವರ್ತಕರ ಸಂಘದ ಬೆಂಬಲವಿದೆ. ಆದರೆ, ಈ ಹೋರಾಟದ ಭಾಗವಾಗಿ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಆಚರಿಸುವುದರಿಂದ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದವರ ನಿತ್ಯದ ಕೆಲಸ- ಕಾರ್ಯಗಳಿಗೆ ಅಡಚಣಿ ಆಗಲಿದೆ. ಆದ್ದರಿಂದ, ಬಂದ್‌ಗೆ ಸಂಘವು ಬೆಂಬಲಿಸದಿರಲು ತೀರ್ಮಾನಿಸಿದೆ. ಆದರೆ, ಇತರ ಎಲ್ಲ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹಂಪಣ್ಣವರ ತಿಳಿಸಿದ್ದಾರೆ.

ಬಂದ್ ಇಲ್ಲ, ಯಥಾಸ್ಥಿತಿ: ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಇಲ್ಲ. ಎಂದಿನಂತೆಯೇ ಶಾಲೆ, ಕಾಲೇಜು, ಬ್ಯಾಂಕ್, ಸರ್ಕಾರಿ ಕಚೇರಿಗಳು ನಡೆಯಲಿವೆ. ಸಾರ್ವಜನಿಕ ವಲಯ ಸೇವೆ ಎಂದಿನಂತೆಯೇ ಇರಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ತಿಳಿಸಿದ್ದಾರೆ.

ಬಂದ್ ಇಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮ: ಬಂದ್ ಪ್ರಯುಕ್ತ ಯಾವ ಸಂಘಟನೆಗಳು ಮನವಿ ಪತ್ರ ನೀಡಿಲ್ಲ. ಅಣ್ಣಿಗೇರಿ, ನವಲಗುಂದ ಭಾಗದ ಕೆಲವು ರೈತರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ಶ್ರುತಿ ಎನ್.ಎಸ್. ತಿಳಿಸಿದ್ದಾರೆ