SK Home Ad
Home ಸಿನಿ ಮಿಲ್ಸ್ ‘ಶಾಂತಿಕ್ರಾಂತಿ’ ರೀ-ರಿಲೀಸ್ : ವೈರಲ್ ಚರ್ಚೆಗೆ ತೆರೆ ಎಳೆದ ಬಾಲಾಜಿ

‘ಶಾಂತಿಕ್ರಾಂತಿ’ ರೀ-ರಿಲೀಸ್ : ವೈರಲ್ ಚರ್ಚೆಗೆ ತೆರೆ ಎಳೆದ ಬಾಲಾಜಿ

0
72
‘ಶಾಂತಿಕ್ರಾಂತಿ’ ಮರುಬಿಡುಗಡೆ ಕುರಿತು ಹಕ್ಕುದಾರ ಬಾಲಾಜಿ ವೀರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

‘ಶಾಂತಿಕ್ರಾಂತಿ’ ರೀ-ರಿಲೀಸ್ ಟ್ರೆಂಡ್‌ ಬಗ್ಗೆ ಹಕ್ಕುದಾರ ಬಾಲಾಜಿ ವೀರಸ್ವಾಮಿ ಸ್ಪಷ್ಟನೆ – ಶಾಂತಿಕ್ರಾಂತಿ ಮರುಬಿಡುಗಡೆ ಆಗುತ್ತಾ? ಹಕ್ಕುದಾರ ಬಾಲಾಜಿ ವೀರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಶಾಂತಿಕ್ರಾಂತಿ’ ಮರುಬಿಡುಗಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಚಿತ್ರದ ಹಕ್ಕುದಾರರಾದ ಬಾಲಾಜಿ ವೀರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

1991ರಲ್ಲಿ ಬಿಡುಗಡೆಯಾದ ‘ಶಾಂತಿಕ್ರಾಂತಿ’ ರವಿಚಂದ್ರನ್ ಅವರ ಪ್ರಮುಖ ಹಾಗೂ ಬಹುಭಾಷಾ ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ನಾಗಾರ್ಜುನ ಹಾಗೂ ತಮಿಳು-ಹಿಂದಿ ಆವೃತ್ತಿಗಳಲ್ಲಿ ರಜನಿಕಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಚಿತ್ರದ ಮರುಬಿಡುಗಡೆ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ. ಆದರೆ ‘ರೀ-ರಿಲೀಸ್’ ಕುರಿತು ವಿವಿಧ ರೀತಿಯ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಹಕ್ಕುದಾರ ಬಾಲಾಜಿ ವೀರಸ್ವಾಮಿ ಅವರು ಈ ಟ್ರೆಂಡ್‌ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ಸಂಸ್ಥೆ ಹಾಗೂ ಸಹೋದರ ರಚಿಚಂದ್ರನ ಮತ್ತು ಚಿತ್ರದ ಮೇಲಿನ ಸಾರ್ವಜನಿಕರ ಅಭಿಮಾನಕ್ಕೆ ಚಿರಋಣಿ ಎಂದಿದ್ದಾರೆ. ಶಾಂತಿ ಕ್ರಾಂತಿ ರೀ-ರಿಲೀಸ್ ಕುರಿತಂತೆ ಅಭಿಮಾನಿಗಳಲ್ಲಿ ಕ್ರೇಜ್‌ ಆರಂಭವಾಗುತ್ತಿದಂತೆ ಬಾಲಾಜಿ ಹಾಗೂ ಸಹೋದರ ರವಿಚಂದ್ರನ ಈ ಕುರಿತಂತೆ ಮಾತನಾಡಿರುವುದಾಗಿ ತಿಳಿಸಿರುವ ಅವರು, ರೀ-ರಿಲೀಸ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಶಾಂತಿ ಕ್ರಾಂತಿಯ ರೀಲ್‌ ಈಗಾಗಲೆ ಮೆಲ್ಟ್‌ ಆಗಿದೆ, ಅದನ್ನು ಈಗಿನ ಟೆಕ್ನಾಲಜೆಗೆ ತಕ್ಕಂತೆ ಮಾರ್ಪಾಡು ಮಾಡುವುದು ಕಷ್ಟಕರ ಆದರೆ ಅದನ್ನು ತಾಂತ್ರಿಕವಾಗಿ ಹೇಗೆಲ್ಲಾ ಮಾಡಬಹದು ಎಂಬ ನಮ್ಮ ಪ್ರಯತ್ನ ನಿರಂತರವಾಗಿ ಸಾಗಿದೆ. ಸೂಕ್ತ ತಂತ್ರಜ್ಞಾನ ದೊರೆತಲ್ಲಿ ಅದನ್ನು ಸಿದ್ದಪಡಿಸಿ ನಿಮ್ಮ ಮುಂದೆ ಪ್ರದರ್ಶನ ಮಾಡುವ ಉದ್ದೇಶದ ಆಶಯ ನಮಗೂ ಇದೆ. ಹಾಗೆನಾದರೂ ಈ ಕಾರ್ಯ ಆರಂಭವಾದರೆ ನಿಮ್ಮೆಲ್ಲರಿಗೂ ತಿಳಿಸಿ ಓಂ ಕಾರ ಹಾಕಲಾಗುವುದು ಎಂದಿದ್ದಾರೆ.

ಆದರೆ ಇನ್ನೂ ಮುಂದುವರೆದು ತಾಂತ್ರಿಕವಾಗಿ ಈ ಕೆಲಸ ಆರಂಭ ಮಾಡಿದ್ರೆ ಕನಿಷ್ಟ ಒಂದು ವರ್ಷ ತಗಲಿಲದೆ ಎಂದು ಸಹ ತಿಳಿಸಿದ್ದಾರೆ. ಬಿಡುಗಡೆ ಕುರಿತಂತೆ ಈಗಾಗಲೆ ದಿನಾಂಕ ವದಂತಿಗಳನ್ನೂ ನಂಬ ಬೇಡಿ ಎಂದು ವಿನಂತಿಸಿದ್ದಾರೆ.

‘ಶಾಂತಿಕ್ರಾಂತಿ’ ತನ್ನ ಕಾಲದಲ್ಲಿ ದೊಡ್ಡ ಮಟ್ಟದ ನಿರ್ಮಾಣ, ಬಹುಭಾಷಾ ತಾರಾಬಳಗ ಹಾಗೂ ಅದ್ದೂರಿ ದೃಶ್ಯ ವೈಭವದಿಂದ ಗಮನ ಸೆಳೆದಿದ್ದ ಚಿತ್ರವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ವಾಣಿಜ್ಯವಾಗಿ ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ, ಚಿತ್ರದ ನಿರ್ಮಾಣದ ಸಾಹಸ ಮತ್ತು ರವಿಚಂದ್ರನ್ ಅವರ ಪ್ರಯೋಗಶೀಲತೆಗೆ ಇಂದಿಗೂ ಚರ್ಚೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಚಿತ್ರವನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆಯೇ ಎಂಬುದು ರವಿಚಂದ್ರನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಕ್ಕುದಾರರ ಇತ್ತೀಚಿನ ಸ್ಪಷ್ಟನೆಯ ನಂತರ ‘ಶಾಂತಿಕ್ರಾಂತಿ’ ಮರುಬಿಡುಗಡೆಯ ಮುಂದಿನ ಬೆಳವಣಿಗೆಗಳತ್ತ ಸಿನಿಪ್ರಿಯರ ಗಮನ ನೆಟ್ಟಿದೆ.