Home Advertisement
Home ಸಿನಿ ಮಿಲ್ಸ್ ಕಿಂಗ್‌ vs ರಾಕಿಂಗ್‌ : ವರ್ಷಾಂತ್ಯಕ್ಕೆ ಟಾಕ್ಸಿಕ್‌ ಕಿಕ್‌…?

ಕಿಂಗ್‌ vs ರಾಕಿಂಗ್‌ : ವರ್ಷಾಂತ್ಯಕ್ಕೆ ಟಾಕ್ಸಿಕ್‌ ಕಿಕ್‌…?

0
74

– ಗಣೇಶ್ ರಾಣೆಬೆನ್ನೂರು

ಪ್ರಸಕ್ತ ವರ್ಷದ ನಾಲ್ಕು ತಿಂಗಳಿನಲ್ಲಿ ಕನ್ನಡ ಸೇರಿದಂತೆ ಪರಭಾಷಾ ಸಿನಿಮಾಗಳು ಸುಮಾರು ಇನ್ನೂರಕ್ಕೂ ಅಧಿಕ ಬಿಡುಗಡೆಯಾಗಿವೆ. ಆದರೆ ಅವೆಲ್ಲದರ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಯಶಸ್ಸನ್ನು ದಾಖಲಿಸಿವೆ. ಇನ್ನು ಕೆಲವೇ ಕೆಲವು ಸಿನಿಮಾಗಳು ನಿರ್ಮಾಪಕರ ಥೈಲಿ ಭರ್ತಿ ಮಾಡಿವೆ. ಅದರಲ್ಲಿ ಕೆಲವು ಹಾಕಿದ ಬಂಡವಾಳ, ಬಡ್ಡಿ ಇತ್ಯಾದಿಗಳಿಗೆ ಸರಿಸಮನಾಗಿವೆ.

ಹಾಗೆ ನೋಡಿದರೆ ಈವರೆಗೂ ಹೆಚ್ಚಾಗಿ ಸ್ಟಾರ್ ಸಿನಿಮಾಗಳು ತೆರೆಕಂಡಿಲ್ಲ. ಅರ್ಧವಾರ್ಷಿಕ ಬಳಿಕ ಸ್ಟಾರ್ ಸಿನಿಮಾಗಳು ಚಿತ್ರರಂಗವನ್ನು ರಂಗೇರಿಸುವ ಭರವಸೆಯಿದೆ. ಹಾಗೆ ನೋಡಿದರೆ ವರ್ಷದ ಆರಂಭದಲ್ಲೇ ಕೆಲವು ಸ್ಟಾರ್‌ಗಳು ಚಿತ್ರಮಂದಿರಕ್ಕೆ ಕಾಲಿಡಬೇಕಿತ್ತು. ಆದರೆ ಯಾಕೋ ಸದ್ಯದ ಮಟ್ಟಿಗೆ ದರ್ಶನ ಕೊಡುವ ಯಾವುದೇ ಸುಳಿವಿಲ್ಲ..!

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಯಶ್ ಅಭಿನಯದ ಟಾಕ್ಸಿಕ್ ಬಿಡುಗಡೆಯಾಗಿ ಅದಾಗಲೇ ಐವತ್ತು ದಿನಗಳನ್ನೂ ಪೂರೈಸಬೇಕಿತ್ತು… ಕಾರಣಾಂತರಗಳಿಂದ ಜೂನ್ 4ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಮತ್ತಷ್ಟು ತಾಂತ್ರಿಕ ಕಾರಣಗಳನ್ನೊಡ್ಡಿ ಮತ್ತೆ ರಿಲೀಸ್ ಡೇಟ್ ಮುಂದೂಡಿದೆ ಟಾಕ್ಸಿಕ್ ಟೀಂ.

ಸಹಜವಾಗಿಯೇ ದೊಡ್ಡ ಸ್ಟಾರ್‌ಗಳ ಸಿನಿಮಾ ಎಂದಾಗ ಬಿಡುಗಡೆ ದಿನಾಂಕವನ್ನು ಅಭಿಮಾನಿಗಳು ಎದುರು ನೋಡುತ್ತಿರುತ್ತಾರೆ. ಆದರೆ ಈ ಬಾರಿ ರಿಲೀಸ್ ಡೇಟ್ ಹೇಳದೇ, ಮುಂದಿನ ದಿನಗಳಲ್ಲಿ ಅಪ್‌ಡೇಟ್ ಮಾಡುತ್ತೇವೆ ಎಂದು ಕೈ ತೊಳೆದುಕೊಂಡಿದೆ. ಹಾಗಾದರೆ ಅಭಿಮಾನಿಗಳ ಕಾಯುವಿಕೆಗೆ ಕಿಮ್ಮತಿಲ್ವ? ಎನ್ನುವವರಿಗೆ ಒನ್ಸ್ ಅಗೇಯ್ನ್ ಟೆಕ್ನಿಕಲ್ ರೀಸನ್… ಎನ್ನಲಾಗುತ್ತದೆ..!

ಕ್ರಿಸ್‌ಮಸ್‌ಗೆ ಯಶ್ ದರ್ಶನ..? : ತಾಂತ್ರಿಕ ಕೆಲಸಗಳು ಅಂದುಕೊಂಡಂತೆ ಪೂರ್ಣಗೊಂಡರೆ ಟಾಕ್ಸಿಕ್ ಸಿನಿಮಾವನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಕುರಿತು ಚಿತ್ರತಂಡ ಆಲೋಚಿಸುತ್ತಿದೆ ಎಂಬ ಮಾತಿದೆ. ಯಶ್ ನಟನೆಯ ಕೆಜಿಎಫ್ ಕ್ರಿಸ್‌ಮಸ್ ವೇಳೆ ಬಿಡುಗಡೆಗೊಂಡು ಭರ್ಜರಿ ಯಶಸ್ಸು ದಾಖಲಿಸಿತ್ತು. ಹಾಗೆಯೇ ಅವರ ರಾಮಾಚಾರಿ ಸೇರಿದಂತೆ ಅನೇಕ ಸಿನಿಮಾಗಳು ವರ್ಷಾಂತ್ಯದಲ್ಲಿ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ.

ಅಂದು ಜೀರೋ, ಇಂದು..? : ಕೆಜಿಎಫ್ ತೆರೆಕಂಡ ದಿನವೇ ಶಾರುಖ್ ಖಾನ್ ನಟನೆಯ ಜೀರೋ ಸಹ ತೆರೆಕಂಡಿತ್ತು. ಯಶ್ ಗೆಲುವಿನ ಅಲೆಯ ಮುಂದೆ ಶಾರುಖ್ ಅಕ್ಷರಶಃ ತರಗೆಲೆಯಂತಾಗಿದ್ದರು. ಇದೀಗ ಶಾರುಖ್ ನಟನೆಯ ಕಿಂಗ್ ಸಿನಿಮಾ ಡಿಸೆಂಬರ್ ೨೪ರಂದು ರಿಲೀಸ್ ಮಾಡುವುದಾಗಿ ಅನೌನ್ಸ್ ಆಗಿದೆ. ಅದೇ ದಿನದಂದು ಟಾಕ್ಸಿಕ್ ಸಹ ತೆರೆಕಾಣಲಿದೆಯಂತೆ. ಹಾಗಾದರೆ ಇಬ್ಬರ ಪೈಪೋಟಿಯ ನಡುವೆ ಯಾವ ಸಿನಿಮಾ ಜಯಭೇರಿ ಬಾರಿಸಲಿದೆ ಕಾದು ನೋಡಬೇಕು.

ನೂರಾರು ಅಡೆತಡೆ… ಯಾವಾಗ ಬಿಡುಗಡೆ..? : ಯಶ್ ನಟಿಸಿರುವ ಟಾಕ್ಸಿಕ್ ಸಿನಿಮಾ ಅದಾಗಲೇ ಶೂಟಿಂಗ್ ಮುಗಿಸಿಕೊಂಡಿದೆ. ಮಾರ್ಚ್ನಲ್ಲೇ ಬಿಡುಗಡೆಯ ಯೋಜನೆ ಇದ್ದುದ್ದರಿಂದ ಪ್ರಮುಖ ಪಾತ್ರಧಾರಿಗಳ ಪೋಸ್ಟರ್, ಟೀಸರ್ ಹಾಗೂ ಹಾಡುಗಳನ್ನು ಹರಿಬಿಡಲಾಗಿತ್ತು. ಆದರೆ, ರಿಲೀಸ್ ಡೇಟ್ ಸಮೀಪಿಸುತ್ತಿದ್ದಂತೆಯೇ ಏಕಾಏಕಿ ಜೂನ್‌ಗೆ ಮುಂಡೂಡಲಾಯಿತು. `ಇಷ್ಟೇ ಕಾಯ್ದ ಮೇಲೆ ಇನ್ನೆರಡು ತಿಂಗಳು ತಾನೇ…’ ಎಂದುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ರಿಲೀಸ್ ಡೇಟ್ ಮುಂಡೂಡಿದ್ದರಿಂದ ನಿರಾಸೆಯಾಯಿತು.

ಹಾಗಾದರೆ ಟಾಕ್ಸಿಕ್ ರಿಲೀಸ್ ಯಾವಾಗ..? ತಡವಾಗಲು ಕಾರಣವೇನು..?: ಈ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತದೆ. ಮೂಲಗಳ ಪ್ರಕಾರ ಸಿನಿಮಾವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ತರಲು ಮತ್ತಷ್ಟು ಸಮಯ ಹಿಡಿಯುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಸಿನಿಮಾದ ಕೆಲವು ಭಾಗವನ್ನು ಮರು ಚಿತ್ರೀಕರಣ ನಡೆಸಲಾಗುತ್ತಿದೆ. ಗ್ರಾಫಿಕ್ಸ್ ಕೆಲಸ ಅಂದುಕೊಂಡಂತೆ ಬರದೇ ಇದ್ದುದ್ದರಿಂದ ಮತ್ತೊಮ್ಮೆ ಇಡೀ ಗ್ರಾಫಿಕ್ಸ್ ಕೆಲಸವನ್ನು ಬೇರೊಂದು ಕಡೆ ಮಾಡಿಸಲಾಗುತ್ತಿದೆ ಎಂಬುದು ಮತ್ತೊಂದು ಮೂಲಗಳಿಂದ ಬಂದ ಮಾಹಿತಿ.

ಇವೆಲ್ಲವೂ ತಾಂತ್ರಿಕ ಕಾರಣಗಳೇ ಹೊರತು… ಬಜೆಟ್ ತೊಂದರೆಯಿಂದಾಗಿ ಸಿನಿಮಾ ತಡವಾಗುತ್ತಿಲ್ಲ ಎಂಬುದು ಸಿನಿ ಪಂಡಿತರ ಅನಿಸಿಕೆ. ಯಾಕೆಂದರೆ ಈ ಸಿನಿಮಾಕ್ಕೆ ಖುದ್ದು ಯಶ್ ಸಹ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಕೆವಿಎನ್ ಸಂಸ್ಥೆಯೂ ಹಣಕಾಸಿನ ವಿಚಾರದಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂಬುದು ಹತ್ತಿರದಿಂದ ಬಲ್ಲವರ ಮಾತು.

ರಜನಿಕಾಂತ್ ಜೈಲರ್ ೨ ಬಿಡುಗಡೆ ಮುಂದಕ್ಕೆ! : ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅದರ ಬೆನ್ನಲ್ಲೇ ಅದೇ ತಂಡದಿಂದ ಜೈಲರ್ ೨ ಅನೌನ್ಸ್ ಆಗಿತ್ತು. ಸಿನಿಮಾದ ಚಿತ್ರೀಕರಣವೇನೋ ಸರಾಗವಾಗಿ ಮುಗಿಯಿತು. ಆದರೆ ಅಂದುಕೊಂಡ ಸಮಯದಲ್ಲಿ ಸಿನಿಮಾವನ್ನು ತೆರೆ ಕಾಣಿಸಲು ಸಾಧ್ಯವಾಗುತ್ತಿಲ್ಲವಂತೆ. ಚಿತ್ರತಂಡ ಮೊದಲಿಗೆ ಅನೌನ್ಸ್ ಮಾಡಿದಂತೆ ಜೂನ್‌ನಲ್ಲಿ ರಿಲೀಸ್ ಮಾಡಬೇಕಿತ್ತು. ಕಾರಣಾಂತರಗಳಿಂದ ಆ ಡೇಟ್‌ಗೆ ಜೈಲರ್-೨ ತೆರೆ ಕಾಣಿಸಲು ಸಾಧ್ಯವಾಗದ ಕಾರಣ, ಚಿತ್ರತಂಡ ಇದೀಗ ಅಕ್ಟೋಬರ್‌ನಲ್ಲಿ ಜೈಲರ್ ೨ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಎನ್ನಲಾಗುತ್ತಿದೆ.