ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಈ ಸ್ಟೈಲಿಶ್ ಸೆಲ್ಫಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಪ್ಪು ಸ್ಲೀವ್‌ಲೆಸ್ ಟೀ-ಶರ್ಟ್, ದಟ್ಟ ಗಡ್ಡ, ವಿಭಿನ್ನ ಹೇರ್‌ಸ್ಟೈಲ್ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನ ಈ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.
ವಿಶೇಷವೆಂದರೆ, ಈ ಸೆಲ್ಫಿಯನ್ನು ಕ್ಲಿಕ್ಕಿಸಿದ್ದು ಸ್ವತಃ ಕಿಚ್ಚ ಸುದೀಪ್ ಅವರು ಎನ್ನುವುದು ವಿಶೇಷ. ‘ಸಂಯುಕ್ತ ಕರ್ನಾಟಕ’ ಡಿಜಿಟಲ್ ವಿಭಾಗದ ಮುಖ್ಯಸ್ಥ ಕೃಷ್ಣ ಅವರೊಂದಿಗಿನ ಸೆಲ್ಫಿ ಇದಾಗಿದ್ದು. ಕಿಚ್ಚನ ಜೊತೆಗಿನ ಈ ವಿಶೇಷ ಕ್ಷಣದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುದೀಪ್ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.
ಇದು ಯಾವ ಸಿನಿಮಾದ ಲುಕ್?: ಫೋಟೋ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳ ನಡುವೆ ಮತ್ತೊಂದು ಚರ್ಚೆ ಶುರುವಾಗಿದೆ. ಸುದೀಪ್ ಅವರ ಮುಂಬರುವ ಸಿನಿಮಾಗಳ ಪೈಕಿ ಯಾವುದಾದರೂ ಚಿತ್ರದ ಪಾತ್ರಕ್ಕಾಗಿ ಈ ಹೊಸ ಲುಕ್ ಇರಬಹುದೇ? ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್‌ಲುಕ್‌ನಲ್ಲಿ ಸುದೀಪ್ ಅವರನ್ನು ರಗಡ್ ಅವತಾರದಲ್ಲಿ ಪರಿಚಯಿಸಲಾಗಿದ್ದು, ಚಿತ್ರದ ಪ್ರಚಾರವೂ ಆರಂಭವಾಗಿದೆ.
ಇದರ ಜತೆಗೆ ಸುದೀಪ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ದೇವರಾಯ’ ಕೂಡ ಘೋಷಣೆಯಾಗಿದ್ದು, ಅದರಲ್ಲಿ ಅವರು ಐತಿಹಾಸಿಕ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ಹೀಗಾಗಿ ಇದೀಗ ವೈರಲ್ ಆಗಿರುವ ಫೋಟೋ ‘ಬಿಲ್ಲ ರಂಗ ಭಾಷಾ’ದ ಯಾವುದಾದರೂ ಹೊಸ ಲುಕ್‌ನಾ? ಅಥವಾ ಇನ್ನಾವುದೇ ಮುಂಬರುವ ಸಿನಿಮಾಗಾಗಿ ಸುದೀಪ್ ಮಾಡಿಕೊಂಡಿರುವ ಲುಕ್‌ನಾ? ಎಂಬ ಚರ್ಚೆ ಅಭಿಮಾನಿಗಳಲ್ಲಿ ನಡೆಯುತ್ತಿದೆ.
ಆದರೆ, ಈ ಫೋಟೋ ಯಾವ ಚಿತ್ರದ ಲುಕ್ ಎಂಬುದನ್ನು ಸುದೀಪ್ ಅಥವಾ ಆಯಾ ಚಿತ್ರತಂಡ ಅಧಿಕೃತವಾಗಿ ಖಚಿತಪಡಿಸಿಲ್ಲ. ಹೀಗಾಗಿ ಅಭಿಮಾನಿಗಳ ಊಹೆ ಸದ್ಯಕ್ಕೆ ಊಹೆಯಾಗಿಯೇ ಉಳಿದಿದೆ.
ಕಿಚ್ಚನ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಇರುವ ಕುತೂಹಲಕ್ಕೆ ಈ ಒಂದೇ ಒಂದು ಸೆಲ್ಫಿ ಮತ್ತಷ್ಟು ಇಂಧನ ನೀಡಿದ್ದು, ‘ಕಿಚ್ಚನ ಹೊಸ ಲುಕ್ ಹಿಂದೆ ಯಾವ ಸಿನಿಮಾ ಇದೆ?’ ಎನ್ನುವ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.






















