SK Home Ad
Home ನಮ್ಮ ಜಿಲ್ಲೆ ಧಾರವಾಡ ಪರಿಶೀಲನೆಯ ನೆಪದಲ್ಲಿ ಮಾಸಾಶನಕ್ಕೆ ಕೊಕ್ಕೆ

ಪರಿಶೀಲನೆಯ ನೆಪದಲ್ಲಿ ಮಾಸಾಶನಕ್ಕೆ ಕೊಕ್ಕೆ

0
93

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತೆಗಳಡಿ ನೀಡುತ್ತಿರುವ ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವೃದ್ಧಾಪ್ಯ ಮಾಸಾಶನ (ವೇತನ) ಕಳೆದ 4-5 ತಿಂಗಳುಗಳಿಂದ ರಾಜ್ಯದ 16 ಲಕ್ಷ ಫಲಾನುಭವಿಗಳಿಗೆ ಸಂದಾಯವಾಗಿಲ್ಲ. ಈ ಪೈಕಿ ಧಾರವಾಡ ಜಿಲ್ಲೆಯ 43,206 ಫಲಾನುಭವಿಗಳನ್ನು ಅನರ್ಹರು ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 49,827 ಫಲಾನುಭವಿಗಳ ಪೈಕಿ 43,206 ಮಂದಿಗೆ ಮಾಸಾಶನ ಸಂದಾಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಅನರ್ಹರು ಎಂದು ಪರಿಗಣಿಸಿದೆ. ಅರ್ಹರು ಮತ್ತು ಅನರ್ಹರು ಎಂಬ ಗೊಂದಲದ ಹಿನ್ನೆಲೆಯಲ್ಲಿ ಸರ್ಕಾರ ಕಳೆದೊಂದು ತಿಂಗಳುಗಳಿಂದ ಸಮೀಕ್ಷೆ ನಡೆಸುತ್ತಿದೆ. ಸ್ವತಃ ಫಲಾನುಭವಿಗಳೇ ತಮ್ಮ ಗ್ರಾಮ ವ್ಯಾಪ್ತಿಯ ಪಂಚಾಯಿತಿ ಹಾಗೂ ತಹಶೀಲ್ದಾರ್ ಕಚೇರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಸಮೀಕ್ಷೆ ಹಾಗೂ ಫಲಾನುಭವಿಗಳೇ ಖುದ್ದು ಭೇಟಿ ನೀಡಿ ದಾಖಲೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ 5,570 ಅರ್ಹರಿಗೆ ಮುಂದಿನ ತಿಂಗಳಿನಿಂದ ಹಳೇ ಪಿಂಚಣಿ ಸೇರಿ ಸಂದಾಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫಲಾನುಭವಿಗಳಿಗೆ ಸಂಕಷ್ಟ: ದಿಢೀರನೆ ಸ್ಥಗಿತಗೊಂಡಿದ್ದರಿಂದ ಮಾಸಾಶನವನ್ನೇ ನಂಬಿ ಜೀವನ ಸಾಗಿಸುತ್ತಿರುವ ಬಹುತೇಕ ವೃದ್ಧರು, ಅಂಗವಿಕಲರು ಹಾಗೂ ವಿಧವೆಯರು ಕಂಗಾಲಾಗಿದ್ದಾರೆ. ಪೆನ್ಶನ್ ಹಣವನ್ನು ಔಷಧಿ, ವೈದ್ಯಕೀಯ ಉದ್ದೇಶಕ್ಕೆ ಬಳಸುತ್ತಿದ್ದರು. ಇದೀಗ ಶೇ. 70ರಷ್ಟು ಫಲಾನುಭವಿಗಳು ಔಷಧಿ ಖರೀದಿಗೂ ಪರದಾಡುವಂತಾಗಿದೆ.

ಪರಿಶೀಲನೆಯ ವೇಳೆಯಲ್ಲಿ ನಿಗದಿತ ವಿಳಾಸದಲ್ಲಿ ಫಲಾನುಭವಿಗಳು ವಾಸವಾಗದೇ ಇರುವುದು, ಫಲಾನುಭವಿಗಳ ಕುಟುಂಬ ಸದಸ್ಯರು ಆದಾಯ ತೆರಿಗೆ ಭರಣ ಮಾಡಿರುವುದು, ಹಲವು ತಿಂಗಳುಗಳಿಂದ ಬ್ಯಾಂಕ್ ಖಾತೆಗೆ ಬಂದಿರುವ ಮಾಸಾಶನದ ಹಣವನ್ನು ಬಿಡಿಸಿಕೊಳ್ಳದೇ ಇರುವುದು, ಇ-ಕೆವೈಸಿ ಮಾಡಿಸದೇ ಇರುವುದು, ಜೀವಂತ ಪ್ರಮಾಣಪತ್ರ ಸಂದಾಯ ಮಾಡದಿರುವುದು, ಕುಟುಂಬ ಸದಸ್ಯರು ಹೊಸ ವಾಹನ ಅಥವಾ ಆಸ್ತಿ ಖರೀದಿ ಮಾಡಿದ್ದರೆ ಅದು ಕುಟುಂಬ ಆ್ಯಪ್‌ನಲ್ಲಿ ದಾಖಲಾಗಿ ಪಿಂಚಣಿ ಸ್ಥಗಿತವಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮರಳಿ ಪಡೆಯುವುದು ಹೇಗೆ?: ತಾಂತ್ರಿಕ ದೋಷ ಅಥವಾ ಮೇಲೆ ವಿವರಿಸಲಾದ ಕಾರಣಗಳಿಂದಾಗಿ ಮಾಸಾಶನ ನಿಂತು ಹೋದಲ್ಲಿ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಅರ್ಹರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ವಿಆರ್‌ಐ ಅಧಿಕಾರಿಗಳ ನೇಮಕ ಮಾಡಿದೆ. ಅಧಿಕಾರಿಗಳು ಸ್ವತಃ ಫಲಾನುಭವಿಗಳ ಮನೆಗೆ ಭೇಟಿ ನೀಡುತ್ತಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಫಲಾನುಭವಿಗಳು ಮರಣ ಹೊಂದಿದ್ದ ಪಕ್ಷದಲ್ಲಿ ಮಾತ್ರ ಸ್ಥಳದಲ್ಲೇ ಪಿಂಚಣಿಯನ್ನು ರದ್ದು ಮಾಡಲಾಗುತ್ತಿದೆ. ಒಂದು ವೇಳೆ ಜೀವಂತವಿರುವ ನೈಜ ಫಲಾನುಭವಿಗಳಿಗೆ ತೊಂದರೆಯಾಗಿದ್ದರೆ ಸ್ಥಳದಲ್ಲೇ ಪಿಂಚಣಿ ಬಿಡುಗಡೆ ಮಾಡಲಾಗುತ್ತಿದೆ. ಅಥವಾ ಫಲಾನುಭವಿಗಳೇ ಸ್ವತಃ ಪಂಚಾಯಿತಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ಈ ಕುರಿತಂತೆ ಮಾತನಾಡಿರುವ ತಹಶೀಲ್ದಾರ್ ಮಹೇಶ ಗಸ್ತಿ, “ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಲು ಸರ್ಕಾರ ಮುಂದಾಗಿಲ್ಲ. ತಾಂತ್ರಿಕ ತೊಂದರೆ ಅಥವಾ ದಾಖಲಾತಿಗಳಿಗೆ ಸಂಬಂಧಪಟ್ಟಂತೆ ಮಾಸಾಶನ ತಲುಪದಿರುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.” ಎಂದರು.