SK Home Ad
Home ನಮ್ಮ ಜಿಲ್ಲೆ ಧಾರವಾಡ ದೇಹಕ್ಕೆ 99 ವಯಸ್ಸು, ಯೋಗವೇ ಈ ವೃದ್ಧೆಯ ತಪಸ್ಸು!

ದೇಹಕ್ಕೆ 99 ವಯಸ್ಸು, ಯೋಗವೇ ಈ ವೃದ್ಧೆಯ ತಪಸ್ಸು!

0
92

ಯೋಗಕ್ಕೆ ವಯಸ್ಸಿನ ನಿರ್ಬಂಧವಿಲ್ಲ ಅಥವಾ ಯೋಗದಲ್ಲಿ ತೊಡಗಿಸಿಕೊಳ್ಳಲು ಲಿಂಗಭೇದವೂ ಇಲ್ಲ. ಈ ಮಾತಿಗೆ ನಮ್ಮ ನಡುವಿನ ಜ್ವಲಂತ ಉದಾಹರಣೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಸಣ್ಣಗದ್ದೆಯ ಗಣಪಿ ಲಕ್ಷ್ಮೀನಾರಾಯಣ ಭಟ್. ಶತಾಯುಷಿಯಾಗುವುದಕ್ಕೆ ಒಂದು ವರ್ಷ ಬಾಕಿ ಇರುವ ಈ ವೃದ್ಧೆ 99ರ ಈ ಇಳಿವಯಸ್ಸಿನಲ್ಲೂ ನಿತ್ಯ ಯೋಗ ಮಾಡುವುದನ್ನು ನೋಡಿದರೆ ಯುವಕರೂ ನಾಚಬೇಕು!

ಮಲೆನಾಡಿನ ದಟ್ಟ ಕಾನನದ ನಡುವೆ ನಿತ್ಯ ಕಾಯಕವನ್ನು ತಪಸ್ಸಿನಂತೆ ನಡೆಸಿದ ಈ ಹತ್ತು ಮಕ್ಕಳ ತಾಯಿ, ತಾನು ಯಾರಿಗೂ ಭಾರವಾಗಬಾರದು ಎಂಬ ನಿರ್ಧಾರದಿಂದ ನಿತ್ಯ ಬದುಕಿನಲ್ಲಿ ಯೋಗವನ್ನು ಆಯ್ಕೆ ಮಾಡಿಕೊಂಡವರು. ನಿತ್ಯದ ಸಾಂಸಾರಿಕ ಹೊಣೆಗಾರಿಕೆಗಳು ಮತ್ತು ಕೆಲಸಗಳನ್ನೂ ಕೂಡ ಯೋಗದಂತೆಯೇ ನಿರ್ವಹಿಸಿದ ಈ ವೃದ್ಧೆ, ಅಷ್ಟೇ ಶ್ರದ್ಧೆಯಿಂದ ಬದುಕಿಗೆ ಅವಶ್ಯವಾದ ಯೋಗಾಸನಗಳನ್ನೂ ಮಾಡುತ್ತಾರೆ.

`ದುಡಿದ ಹಣ ಮತ್ತು ಸಮಯ ಎರಡೂ ಜಿಮ್ ಎಂಬ ಆಧುನಿಕತೆಯಲ್ಲಿ ಕಳೆದು ಹೋಗುತ್ತಿವೆ. ಇದನ್ನು ತಪ್ಪಿಸಿ, ಮನೆಯಲ್ಲಿಯೇ ಯೋಗಾಸನ ಮತ್ತು ವ್ಯಾಯಾಮಗಳನ್ನು ಮಾಡಿದರೆ ಆರೋಗ್ಯ ಸೇರಿ ಎಲ್ಲಕ್ಕೂ ಒಳ್ಳೆಯದು’ ಎಂಬುದು ಗಣಪಿ ಅವರ ತತ್ವ.

`ಎದ್ದ ಕೂಡಲೇ ಸೂರ್ಯನನ್ನು ನೋಡಿ ನಮಸ್ಕಾರ ಮಾಡಿ. ಎತ್ತರದ ಗಿಡಮರಗಳಿಂದ ಹೂವುಗಳನ್ನು ಕೀಳುವುದು, ಬಗ್ಗಿ ನೆಲ ಸಾರಿಸುವುದು, ದೇವರಿಗೆ ನಮಸ್ಕರಿಸುವುದು, ರಂಗೋಲಿ ಬಿಡಿಸುವುದು, ಹಾಲು ಕರೆಯುವಾಗ ತುದಿಗಾಲಿನಲ್ಲಿ ಕೂರುವುದು, ಬಾವಿಯಿಂದ ನೀರು ಸೇದುವುದು, ಮಜ್ಜಿಗೆ ಕಡಿಯುವುದು, ಕಟ್ಟಿಗೆ ಹೊರುವುದು, ಮನೆಗೆಲಸಗಳನ್ನು ಮಾಡುವುದು ಇವೆಲ್ಲ ಮಹಿಳೆಯರಿಗೆ ಎಲ್ಲ ಕಾಲಕ್ಕೂ ಸೂಕ್ತವಾಗುವ ವ್ಯಾಯಾಮಗಳೇ. ಇವುಗಳಿಗೆ ಕೆಲವಾರು ಆಸನಗಳನ್ನು ಅಳವಡಿಸಿಕೊಂಡು ನಿತ್ಯವೂ ಮಾಡಿದರೆ ಆರೋಗ್ಯ ಮತ್ತು ಬುದ್ಧಿ ಶಕ್ತಿ ಎರಡಕ್ಕೂ ಒಳ್ಳೆಯದು’ ಎಂಬುದು ಅವರ ನಿಲುವು. ಇದರಂತೆಯೇ ಸಾಗುತ್ತಿರುವ ಯೋಗ ವಿಹಾರಿ ಗಣಪಿಯವರು.

ಅವರು ನಿತ್ಯ ಬೆಳಿಗ್ಗೆ ಸುಮಾರು ಒಂದು ತಾಸು ತಮ್ಮ ದೇಹಕ್ಕೆ ಹೊಂದುವಂತಹ ಸಣ್ಣಪುಟ್ಟ ವ್ಯಾಯಾಮಗಳನ್ನು, ಮೈ ಬಗ್ಗಿಸಬಹುದಾದ ಸರಳ ಆಸನಗಳನ್ನು (ಶವಾಸನ, ಬಾಲಾಸನ, ಪದ್ಮಾಸನ ಇತ್ಯಾದಿ) ಮಾಡುತ್ತ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಂಡಿದ್ದಾರೆ. ಅಲ್ಲದೇ ಮನೆಯಲ್ಲಿನ ಸಣ್ಣಪುಟ್ಟ ಕೆಲಸಗಳಿಗೂ ಕೈಜೋಡಿಸುತ್ತಿದ್ದಾರೆ.

ಯಾಂತ್ರಿಕ ಜೀವನದಿಂದ ಹೆಚ್ಚುತ್ತಿರುವ ರೋಗಗಳು: ಎಲ್ಲವೂ ಬೇಗ ಬೇಗ ಆಗಬೇಕೆಂದು ಮನುಷ್ಯ ಯಂತ್ರಗಳಿಗೆ ಅಂಟಿಕೊಂಡಿದ್ದಾನೆ. ಜೀವನವೇ ಯಾಂತ್ರಿಕವಾಗಿದೆ. ಇದರಿಂದ 50ರ ವಯಸ್ಸಿನವರೂ ಕೂಡ 80 ವರ್ಷದವರಂತೆ ಕಾಣುತ್ತಿದ್ದಾರೆ. ಕೆಲಸ ಹಾಗೂ ಯೋಗ ಮಾಡದ ಕಾರಣಕ್ಕೆ ಮಂಡಿನೋವು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲ ಯೋಗವೇ ಮದ್ದು ಎಂದು ಗಣಪಿ ಲಕ್ಷ್ಮಿನಾರಾಯಣ ಭಟ್ ಹೇಳುತ್ತಾರೆ.