ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೈಮಗ್ಗ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಹಾಗೂ ಭಾರತದ ಕೈಮಗ್ಗ ವೈವಿಧ್ಯವನ್ನು ಜಗತ್ತಿಗೆ ಪರಿಚಯಿಸುವಂತೆ ಕರೆ ನೀಡಿದ್ದಾರೆ. ಕೈಮಗ್ಗ ಉತ್ಪನ್ನಗಳೊಂದಿಗೆ ʻGet Ready With Me (GRWM)ʼ ಮಾದರಿಯ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಭಾರತದ ಕೈಮಗ್ಗ ವೈವಿಧ್ಯವನ್ನು ಜನಪ್ರಿಯಗೊಳಿಸೋಣ. ನಿಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳೊಂದಿಗೆ ವಿಡಿಯೊಗಳನ್ನು ಹಂಚಿಕೊಳ್ಳಿ. GRWM ಮಾದರಿಯ ವಿಡಿಯೊಗಳನ್ನೂ ಪೋಸ್ಟ್ ಮಾಡಿ. #NationalHandloomDay ಹ್ಯಾಶ್‌ಟ್ಯಾಗ್ ಬಳಸುವುದನ್ನು ಮರೆಯಬೇಡಿ” ಎಂದು ತಿಳಿಸಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಆಗಸ್ಟ್ 7ರ ಮಹತ್ವವನ್ನು ಸ್ಮರಿಸಿದ ಅವರು, 1905ರ ಆಗಸ್ಟ್ 7ರಂದು ಆರಂಭವಾದ ಐತಿಹಾಸಿಕ ʻಸ್ವದೇಶಿ ಚಳವಳಿʼ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ದು, ಇಂದಿನ ʻಆತ್ಮನಿರ್ಭರ ಭಾರತʼ ಪರಿಕಲ್ಪನೆಗೆ ಬಲವಾದ ಅಡಿಪಾಯ ಹಾಕಿದೆ ಎಂದು ಹೇಳಿದ್ದಾರೆ.
“ಮನೆಯಲ್ಲೇ ಮಗ್ಗಗಳನ್ನು ಇಟ್ಟುಕೊಂಡು ತಮ್ಮ ಕೈಚಳಕದಿಂದ ಸುಂದರ ಬಟ್ಟೆಗಳನ್ನು ತಯಾರಿಸುವ ನಮ್ಮ ನೇಕಾರ ಕುಟುಂಬಗಳು ಆರ್ಥಿಕವಾಗಿ ಇನ್ನಷ್ಟು ಸಬಲರಾಗಬೇಕು. ಅವರ ಶ್ರಮಕ್ಕೆ ಯೋಗ್ಯ ಬೆಲೆ ಸಿಗುವಂತೆ ಮಾಡುವುದು ಮತ್ತು ಅವರನ್ನು ಆರ್ಥಿಕವಾಗಿ ಸಮೃದ್ಧಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಪ್ರಧಾನಿ ಹೇಳಿದರು.
ಭಾರತದ ಸಾಂಪ್ರದಾಯಿಕ ಕೈಮಗ್ಗ ಪರಂಪರೆ, ಸ್ಥಳೀಯ ನೇಕಾರರು ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು. ಪ್ರತಿಯೊಬ್ಬರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸಿ, ಅದನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಭಾರತೀಯ ಕೈಮಗ್ಗಕ್ಕೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.
ಕೈಮಗ್ಗ ಉತ್ಪನ್ನಗಳ ಬಳಕೆ ಹೆಚ್ಚಾದರೆ ಲಕ್ಷಾಂತರ ನೇಕಾರ ಕುಟುಂಬಗಳ ಜೀವನೋಪಾಯಕ್ಕೆ ಬಲ ಸಿಗುವುದರ ಜೊತೆಗೆ, ಭಾರತದ ಶ್ರೀಮಂತ ಕೈಮಗ್ಗ ಪರಂಪರೆ ಮತ್ತು ವೈವಿಧ್ಯತೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.




















