SK Home Ad
Home ನಮ್ಮ ಜಿಲ್ಲೆ ಧಾರವಾಡ ಸರಕು ಸಾಗಣೆ ಆದಾಯದಲ್ಲಿ ಹೊಸ ದಾಖಲೆ ಬರೆದ ನೈಋತ್ಯ ರೈಲ್ವೆ

ಸರಕು ಸಾಗಣೆ ಆದಾಯದಲ್ಲಿ ಹೊಸ ದಾಖಲೆ ಬರೆದ ನೈಋತ್ಯ ರೈಲ್ವೆ

0
47

ಹುಬ್ಬಳ್ಳಿ: ನೈಋತ್ಯ ರೈಲ್ವೆ (South Western Railway) 2026ರ ಜುಲೈ ತಿಂಗಳಲ್ಲಿ ಸರಕು ಸಾಗಣೆ, ಆದಾಯ ಹಾಗೂ ಪ್ರಯಾಣಿಕರ ಸೇವೆಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಜುಲೈ ತಿಂಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡಿರುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ಸಾಗಿಸಲಾಗಿದ್ದ 4.20 ಮಿಲಿಯನ್ ಟನ್ ಸರಕಿನೊಂದಿಗೆ ಹೋಲಿಸಿದರೆ ಈ ಬಾರಿ 11.7 ಶೇಕಡಾ ಹೆಚ್ಚಳ ದಾಖಲಾಗಿದೆ. ಇದು ಕೈಗಾರಿಕೆ, ಕೃಷಿ ಹಾಗೂ ವಾಣಿಜ್ಯ ವಲಯಗಳಿಗೆ ಅಗತ್ಯವಿರುವ ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆಯ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಯಾಗಿರುವುದನ್ನು ತೋರಿಸುತ್ತದೆ.

ಏಪ್ರಿಲ್‌ನಿಂದ ಜುಲೈವರೆಗೆ 17.19 ಮಿಲಿಯನ್ ಟನ್ ಸಾಗಣೆ : 2026-27ನೇ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಾದ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 17.19 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಸರಕು ಸಾಗಣೆ ಪ್ರಮಾಣವು ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿ, ಕಾರ್ಯಾಚರಣಾ ದಕ್ಷತೆ ಹಾಗೂ ಗ್ರಾಹಕಕೇಂದ್ರಿತ ಸೇವೆಯ ಪರಿಣಾಮವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದಾಯದಲ್ಲೂ ಗಣನೀಯ ಏರಿಕೆ : ಜುಲೈ ತಿಂಗಳಲ್ಲಿ ನೈಋತ್ಯ ರೈಲ್ವೆ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ. ಇದರಲ್ಲಿ ಸರಕು ಸಾಗಣೆಯಿಂದ: ₹449.27 ಕೋಟಿ, ಪ್ರಯಾಣಿಕರ ಸೇವೆಯಿಂದ: ₹303.54 ಕೋಟಿ, ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು ಆದಾಯ ₹3,031.84 ಕೋಟಿ ತಲುಪಿರುವುದು ರೈಲ್ವೆಯ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಿದೆ.

14.76 ಮಿಲಿಯನ್ ಪ್ರಯಾಣಿಕರ ಸಂಚಾರ : ಪ್ರಯಾಣಿಕರ ಸೇವೆಯಲ್ಲೂ ನೈಋತ್ಯ ರೈಲ್ವೆ ಉತ್ತಮ ಸಾಧನೆ ದಾಖಲಿಸಿದೆ. ಜುಲೈ ತಿಂಗಳಲ್ಲೇ 14.76 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಸಂಚರಿಸಿದ್ದಾರೆ. ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 61.56 ಮಿಲಿಯನ್ ಪ್ರಯಾಣಿಕರು ರೈಲು ಸೇವೆಯನ್ನು ಬಳಸಿದ್ದಾರೆ. ಈ ಅವಧಿಯಲ್ಲಿ ಪ್ರಯಾಣಿಕರ ವಿಭಾಗದಿಂದ ₹1,203.73 ಕೋಟಿ ಆದಾಯ ಸಂಗ್ರಹವಾಗಿರುವುದು ಪ್ರಯಾಣಿಕರ ವಿಶ್ವಾಸ ಹಾಗೂ ರೈಲು ಸೇವೆಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

ಕಬ್ಬಿಣದ ಅದಿರು ಮತ್ತು ಉಕ್ಕು ಸಾಗಣೆಯಲ್ಲಿ ಭಾರೀ ಏರಿಕೆ : ಸರಕು ಸಾಗಣೆಯ ಪ್ರಮುಖ ವಿಭಾಗಗಳಲ್ಲಿಯೂ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಕಬ್ಬಿಣದ ಅದಿರು ಸಾಗಣೆಯಲ್ಲಿ 1.97 ಮಿಲಿಯನ್ ಟನ್ – 22.4% ಏರಿಕೆ ಹಾಗೂ ಉಕ್ಕು (Steel) ಸಾಗಣೆಯಲ್ಲಿ 1.05 ಮಿಲಿಯನ್ ಟನ್ – 20.6% ಏರಿಕೆ ಕಂಡಿದೆ.

ಕೈಗಾರಿಕಾ ಉತ್ಪಾದನೆ ಹಾಗೂ ರಫ್ತು ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಪ್ರಮುಖ ಸರಕು ವಿಭಾಗಗಳಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣಾ ದಕ್ಷತೆಗೆ ಮತ್ತೊಂದು ಸಾಕ್ಷಿ : ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು, ಜುಲೈ ತಿಂಗಳ ದಾಖಲೆಯ ಸಾಧನೆ ರೈಲ್ವೆಯ ಕಾರ್ಯಾಚರಣಾ ದಕ್ಷತೆ, ಸಿಬ್ಬಂದಿಯ ಸಮರ್ಪಣೆ ಹಾಗೂ ಗುಣಮಟ್ಟದ ಸೇವೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಅವರು ಮುಂದುವರೆದು, ಸರಕು ಸಾಗಣೆ ಸಾಮರ್ಥ್ಯ ಹೆಚ್ಚಿಸುವುದು, ಸಮಯಪಾಲನೆ ಸುಧಾರಿಸುವುದು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದೇ ಕಾರಣದಿಂದ ಸರಕು ಮತ್ತು ಪ್ರಯಾಣಿಕರ ಎರಡೂ ವಿಭಾಗಗಳಲ್ಲಿ ನಿರಂತರ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಮುಂದಿನ ತಿಂಗಳುಗಳಲ್ಲಿಯೂ ಇದೇ ರೀತಿಯ ಸಾಧನೆಯನ್ನು ಮುಂದುವರಿಸಲು ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಸೇವೆಗಳ ವಿಸ್ತರಣೆ ಹಾಗೂ ಗ್ರಾಹಕ ಸ್ನೇಹಿ ಯೋಜನೆಗಳಿಗೆ ಆದ್ಯತೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.