ಪಣಜಿ: ಗೋವಾದಲ್ಲಿ 2013ರಲ್ಲಿ ಮಹಿಳಾ ಪತ್ರಕರ್ತೆಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ. ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿದೆ.
ನ್ಯಾಯಮೂರ್ತಿ ಡಾ. ನೀಲಾ ಗೋಖಲೆ ಹಾಗೂ ನ್ಯಾಯಮೂರ್ತಿ ಅಮಿತ್ ಜಮಸಂದೇಕರ್ ಅವರಿದ್ದ ದ್ವಿಸದಸ್ಯ ಪೀಠವು ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅಂಗೀಕರಿಸಿ, 2021ರ ಮೇ ತಿಂಗಳಲ್ಲಿ ಮಾಪ್ಸಾ ಸೆಷನ್ಸ್ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ರದ್ದುಪಡಿಸಿದೆ. ಈ ಮೂಲಕ ತೇಜ್ ಪಾಲ್ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣವು 2013ರ ನವೆಂಬರ್‌ನಲ್ಲಿ ಗೋವಾದ ಬಾಂಬೋಲಿಂ ಸಮೀಪದ ಪಂಚತಾರಾ ಹೋಟೆಲ್‌ನಲ್ಲಿ ನಡೆದಿತ್ತು. ತೆಹಲ್ಕಾ ಆಯೋಜಿಸಿದ್ದ ‘ಥಿಂಕ್ ಫೆಸ್ಟ್’ ಕಾರ್ಯಕ್ರಮದ ವೇಳೆ ಹೋಟೆಲ್‌ನ ಲಿಫ್ಟ್‌ನಲ್ಲಿ ಸಹೋದ್ಯೋಗಿ ಮಹಿಳಾ ಪತ್ರಕರ್ತೆಯ ಮೇಲೆ ತರುಣ್ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಗೋವಾ ಪೊಲೀಸರು ತನಿಖೆ ನಡೆಸಿ ಬಳಿಕ ಸಿಐಡಿಗೆ ಹಸ್ತಾಂತರಿಸಿದ್ದರು.
ಸುಧೀರ್ಘ ವಿಚಾರಣೆ ಬಳಿಕ 2021ರ ಮೇನಲ್ಲಿ ಮಾಪ್ಸಾ ಸೆಷನ್ಸ್ ನ್ಯಾಯಾಲಯ ತೇಜ್‌ಪಾಲ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
13 ವರ್ಷ ನಡೆದ ಕಾನೂನು ಹೋರಾಟದ ಬಳಿಕ ಇದೀಗ ಹೈಕೋರ್ಟ್ ಗೋವಾ ಪೀಠವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿದೆ. ಈ ತೀರ್ಪು ದೇಶದ ಗಮನ ಸೆಳೆದಿದ್ದ ಈ ಬಹುಚರ್ಚಿತ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.




















