SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಮಹಾ ಹೋರಾಟ

ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಮಹಾ ಹೋರಾಟ

0
316

ಬಾಗಲಕೋಟೆ: ಈಗಾಗಲೇ ರಬಕವಿಯ ಸರ್ವೆ ನಂ. 80ರಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆದೇಶಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬನಹಟ್ಟಿ ನಗರದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಒತ್ತಾಯಿಸಿ ನಾಳೆ ಶನಿವಾರ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದ್ದು, ಅದೇ ದಿನದಿಂದ ಚೆನ್ನಮ್ಮ ವೃತ್ತದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಆರಂಭಗೊಳ್ಳಲಿದೆ ಎಂದು ಪ್ರಜಾಸೌಧ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಂಡು ಶನಿವಾರ ಬೆಳಿಗ್ಗೆ 9ಗಂಟೆಗೆ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಆರಂಭವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಚೆನ್ನಮ್ಮ ವೃತ್ತದಲ್ಲಿನ ಸತ್ಯಾಗ್ರಹ ಸ್ಥಳ ತಲುಪಲಿದೆ. ಬಳಿಕ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ಹೋರಾಟಗಾರರ ಸಮ್ಮುಖದಲ್ಲಿ ಸರದಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗುವುದು.

ಸಂಪೂರ್ಣ ಬಂದ್: ಬಂದ್‌ಗೆ ಅಂಗಡಿ-ಮುಂಗಟ್ಟುಗಳು, ನೇಕಾರಿಕೆ ಕೈಗಾರಿಕೆ, ಬ್ಯಾಂಕುಗಳು, ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ, ಶಾಲಾ ವಾಹನಗಳು, ಸಂತೆ ಸೇರಿದಂತೆ ಬಹುತೇಕ ಎಲ್ಲಾ ವಾಣಿಜ್ಯ ಮತ್ತು ಸಾರ್ವಜನಿಕ ಚಟುವಟಿಕೆಗಳು ಬೆಂಬಲ ಸೂಚಿಸಲಿವೆ. ಆದರೆ ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಸೌಧ ನಿರ್ಮಾಣವಾಗುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.

ಜಾತಿ, ಧರ್ಮ, ಪಂಥ ಹಾಗೂ ರಾಜಕೀಯ ಪಕ್ಷಗಳ ಭೇದ ಮರೆತು ಬನಹಟ್ಟಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಜನತೆ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಹಂತದ ಚುನಾವಣೆಗಳನ್ನು ಬಹಿಷ್ಕರಿಸುವ ಮಹತ್ವದ ನಿರ್ಧಾರವನ್ನೂ ಹೋರಾಟ ಸಮಿತಿ ತಿಳಿಸಿತು.