Home Advertisement
Home ಸುದ್ದಿ ರಾಜ್ಯ ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ವಿಮಾನ ಸೇವೆ ಪುನಾರಂಭ

ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ವಿಮಾನ ಸೇವೆ ಪುನಾರಂಭ

0
38

ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರದಿಂದ ₹28.47 ಕೋಟಿ ನೆರವು : ವಿಮಾನ ಸೇವೆಯಿಂದ ಉದ್ಯಮ, ಶಿಕ್ಷಣ, ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಹತ್ವದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು-ಬೀದರ್ ಹಾಗೂ ಬೆಂಗಳೂರು-ಕಲಬುರಗಿ ನಡುವಿನ ವಿಮಾನಯಾನ ಸೇವೆಗಳನ್ನು ಪುನಾರಂಭಿಸಲಾಗುತ್ತಿದೆ ಎಂದು ಸಚಿವ ಎಂ. ಬಿ . ಪಾಟೀಲ್‌ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, Star Air (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆ ಈ ಎರಡು ಮಾರ್ಗಗಳಲ್ಲಿ ವಿಮಾನ ಸೇವೆ ಒದಗಿಸಲಿದೆ ಎಂದು ಹೇಳಿದ್ದಾರೆ. ಅದರಂತೆ, ಬೆಂಗಳೂರು-ಬೀದರ್-ಬೆಂಗಳೂರು ಮಾರ್ಗದಲ್ಲಿ ಜೂನ್ 1ರಿಂದ ಹಾಗೂ ಬೆಂಗಳೂರು-ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ಜೂನ್ 10ರಿಂದ ವಿಮಾನ ಹಾರಾಟ ಆರಂಭವಾಗಲಿದೆ.

ಇದನ್ನೂ ಓದಿ: ವೆಬ್‌ಸೈಟ್‌ನಲ್ಲಿ ತಾಂತ್ರಿಕ ಅಡಚಣೆ ಹಿನ್ನೆಲೆ CBSE ಮಹತ್ವದ ನಿರ್ಧಾರ

ರಾಜ್ಯ ಸರ್ಕಾರದಿಂದ ₹28.47 ಕೋಟಿ ನೆರವು : ಈ ವಿಮಾನ ಸೇವೆಗಳಿಗೆ ಬೆಂಬಲವಾಗಿ ರಾಜ್ಯ ಸರ್ಕಾರವು ‘ವಯಬಿಲಿಟಿ ಗ್ಯಾಪ್ ಫಂಡಿಂಗ್’ (Viability Gap Funding) ರೂಪದಲ್ಲಿ ₹28.47 ಕೋಟಿ ಆರ್ಥಿಕ ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಎರಡೂ ಮಾರ್ಗಗಳ ವಿಮಾನ ಸೇವೆಗಳಿಗೆ ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಲಾಗಿದೆ.

ಕಲಬುರಗಿ ಸೇವೆ ನಷ್ಟದಿಂದ ಸ್ಥಗಿತ: ಈ ಹಿಂದೆ ಕಲಬುರಗಿಗೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಸೇವೆ ನಷ್ಟದ ಕಾರಣದಿಂದ ಸ್ಥಗಿತಗೊಂಡಿತ್ತು. ಮತ್ತೊಂದೆಡೆ, ಬೀದರ್‌ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನೊಂದಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ವಿಮಾನ ಸೇವೆ ಮುಂದುವರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಂಪರ್ಕ ವಿಸ್ತರಣೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೆ ಈ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.

ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ

ಅಭಿವೃದ್ಧಿಗೆ ಹೊಸ ಅವಕಾಶ : ಕೈಗಾರಿಕೆ, ಶಿಕ್ಷಣ, ಕೃಷಿ, ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಮಾನ ಸಂಪರ್ಕವನ್ನು ಪುನಃ ಆರಂಭಿಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಮಾನ ಸೇವೆ ಪುನಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ಹೂಡಿಕೆ, ಪ್ರವಾಸೋದ್ಯಮ ಚಟುವಟಿಕೆ ಮತ್ತು ಜನಸಂಪರ್ಕ ಮತ್ತಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ವಿಶೇಷವಾಗಿ ಬೀದರ್ ಹಾಗೂ ಕಲಬುರಗಿ ಭಾಗದ ವಿದ್ಯಾರ್ಥಿಗಳು, ಉದ್ಯಮಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ವೇಗವಾದ ಸಂಪರ್ಕ ವ್ಯವಸ್ಥೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.