ಬೆಂಗಳೂರು : ರಾಜ್ಯಾದ್ಯಂತ ಆರಂಭವಾಗಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವದ ಅಡಿಪಾಯ ಮತದಾನವಾಗಿದ್ದು, ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಅರಿತು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಸರಿಯಾಗಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM
ರಾಜ್ಯಾದ್ಯಂತ ಇಂದಿನಿಂದ ಜುಲೈ 29ರವರೆಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ಮನೆ-ಮನೆ ಸಮೀಕ್ಷೆ (Enumeration) ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಗಳಿಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಸಂಗ್ರಹಿಸಲಿದ್ದಾರೆ.
ಈ ಪ್ರಕ್ರಿಯೆಯ ಭಾಗವಾಗಿ ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳು ಹಾಗೂ ಮಾಹಿತಿಗಳನ್ನು ಸಲ್ಲಿಸಿ ತಾವೂ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮತದಾರರಲ್ಲದವರಿಗೆ ಗ್ಯಾರಂಟಿ ಏಕೆ? ಸಿಎಂ ಪ್ರಶ್ನೆ
ಸಾರ್ವಜನಿಕರಿಗೆ ಸಹಕಾರ ನೀಡುವಂತೆ ಮನವಿ : “ನಾಡಿನ ಸಮಸ್ತ ನಾಗರಿಕರು ಹಾಗೂ ಅರ್ಹ ಮತದಾರರು ಮನೆಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಬೇಕು. ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ತಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ.
‘ಪ್ರತಿಯೊಂದು ಮತವೂ ಪವಿತ್ರ ಕರ್ತವ್ಯ’ : ಪ್ರಜಾಪ್ರಭುತ್ವದ ಮಹತ್ವವನ್ನು ವಿವರಿಸಿದ ಡಿ.ಕೆ. ಶಿವಕುಮಾರ್, “ಪ್ರಜಾಪ್ರಭುತ್ವ ಎನ್ನುವುದು ಕೇವಲ ಒಂದು ಆಡಳಿತ ವ್ಯವಸ್ಥೆಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. ಆ ಧ್ವನಿಗೆ ಶಕ್ತಿ ತುಂಬುವುದು ನಮ್ಮ ಮತ. ನಾವು ಚಲಾಯಿಸುವ ಪ್ರತಿಯೊಂದು ಮತವೂ ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪವಿತ್ರ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: SIR: ಧಾರವಾಡ ಡಿಸಿ ಜೊತೆ ಸಂಯುಕ್ತ ಕರ್ನಾಟಕ ಅರ್ಥಪೂರ್ಣ ಫೋನ್ ಇನ್
ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಅರ್ಹ ಮತದಾರರೂ ಅಗತ್ಯ ದಾಖಲೆಗಳನ್ನು ಒದಗಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಈ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ಸಮರ್ಪಕಗೊಳಿಸುವ ಉದ್ದೇಶ ಹೊಂದಲಾಗಿದೆ.




















