UGCET-2026 – ಮೇ 24ರವರೆಗೆ ಅಂಕಪಟ್ಟಿ ಅಪ್‌ಲೋಡ್ ಮಾಡಲು ಅವಕಾಶ: ರಾಜ್ಯ ಮಂಡಳಿ ವಿದ್ಯಾರ್ಥಿಗಳಿಗೆ ಅಂಕ ನಮೂದಿಸುವ ಅಗತ್ಯವಿಲ್ಲ ಎಂದ KEA
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯುಜಿಸಿಇಟಿ-2026 (UGCET-2026) ಅಭ್ಯರ್ಥಿಗಳಿಗಾಗಿ ಮಹತ್ವದ ಸೂಚನೆ ಪ್ರಕಟಿಸಿದೆ. CBSE, CISCE ಹಾಗೂ ಇತರೆ ರಾಜ್ಯ ಪರೀಕ್ಷಾ ಮಂಡಳಿಗಳಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸಲು ಮತ್ತು ಅಂಕಪಟ್ಟಿ ಅಪ್‌ಲೋಡ್ ಮಾಡಲು KEA ವೆಬ್‌ಸೈಟ್‌ನಲ್ಲಿ ವಿಶೇಷ ಲಿಂಕ್ ಬಿಡುಗಡೆ ಮಾಡಲಾಗಿದೆ.
KEA ನೀಡಿರುವ ಮಾಹಿತಿಯ ಪ್ರಕಾರ, ಅಭ್ಯರ್ಥಿಗಳು ನಿಗದಿತ ಲಿಂಕ್ ಮೂಲಕ ಲಾಗಿನ್ ಆದ ಬಳಿಕ ಅವರ 12ನೇ ತರಗತಿಯ ಅಂಕಗಳು ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶಿತ ಅಂಕಗಳು ಸರಿಯಾಗಿದ್ದರೆ ಅವುಗಳನ್ನು ಅಭ್ಯರ್ಥಿಗಳು ದೃಢೀಕರಿಸಬೇಕು.
ಇದನ್ನೂ ಓದಿ: KPS ಶಿಕ್ಷಣ ದೇಶಕ್ಕೇ ಮಾದರಿ : 52 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಚಾಲನೆ
ಒಂದು ವೇಳೆ ಇದುವರೆಗೆ ಅಂಕಗಳನ್ನು ದಾಖಲಿಸದ ಅಭ್ಯರ್ಥಿಗಳಿದ್ದರೆ, ಅವರು ತಮ್ಮ ಅಂಕಗಳನ್ನು ನಮೂದಿಸಿ ನಂತರ ಪೂರಕ ದಾಖಲೆಗಳಾಗಿ ಅಂಕಪಟ್ಟಿಯನ್ನು ಅಪ್‌ಲೋಡ್ ಮಾಡಬೇಕಾಗಿದೆ. ಈ ಪ್ರಕ್ರಿಯೆಗೆ ಮೇ 24ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೆರಿಟ್ ನಿರ್ಧಾರಕ್ಕೆ ಇದೇ ಅಂಕ ಆಧಾರ : KEA ಸ್ಪಷ್ಟಪಡಿಸಿರುವಂತೆ, ಅಭ್ಯರ್ಥಿಗಳು ದೃಢೀಕರಿಸಿ ಸಲ್ಲಿಸುವ ಅಂಕಗಳನ್ನೇ ನಿಯಮಾನುಸಾರ ಮೆರಿಟ್ ನಿರ್ಧಾರಕ್ಕೆ ಬಳಸಲಾಗುತ್ತದೆ. ಬಳಿಕ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಿತ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವೇಳೆ ಅಂಕಗಳ ಪರಿಶೀಲನೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು ತಪ್ಪು ಮಾಹಿತಿ ಅಥವಾ ಸುಳ್ಳು ದಾಖಲೆಗಳನ್ನು ನೀಡಿದರೆ ಅವರ ಸೀಟು ರದ್ದುಪಡಿಸುವುದರ ಜೊತೆಗೆ ಅಭ್ಯರ್ಥಿತನವನ್ನೇ ಅಮಾನ್ಯಗೊಳಿಸಲಾಗುತ್ತದೆ ಎಂದು KEA ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ವಿನೇಶ್ ಫೋಗಟ್ ಪ್ರಕರಣದಲ್ಲಿ WFIಗೆ ಹೈಕೋರ್ಟ್ ತರಾಟೆ
ಹಳೆಯ ವಿದ್ಯಾರ್ಥಿಗಳಿಗೂ ಅವಕಾಶ : 2026 ಮತ್ತು ಅದಕ್ಕೂ ಮುಂಚಿನ ವರ್ಷಗಳಲ್ಲಿ 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ತಮ್ಮ ಅಂಕಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಪುನಃ ಪರೀಕ್ಷೆ ಅಥವಾ ಮುಂದಿನ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.
ರಾಜ್ಯ ಮಂಡಳಿ ವಿದ್ಯಾರ್ಥಿಗಳಿಗೆ ವಿನಾಯಿತಿ : ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಅಂಕಗಳ ವಿವರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನೇರವಾಗಿ ಆನ್‌ಲೈನ್ ಮೂಲಕ KEAಗೆ ಒದಗಿಸಲಿದೆ. ಹೀಗಾಗಿ ರಾಜ್ಯ ಮಂಡಳಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅಂಕಗಳನ್ನು ದಾಖಲಿಸುವ ಅಗತ್ಯವಿಲ್ಲ ಎಂದು KEA ತಿಳಿಸಿದೆ.
ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ
ಯೂಟ್ಯೂಬ್ ಮೂಲಕ ಮಾಹಿತಿ : ಈ ಕುರಿತು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು KEA Vikasana ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳು ತಪ್ಪದೇ ತಮ್ಮ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.























