SK Home Ad
Home ಸುದ್ದಿ ರಾಜ್ಯ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಚಿಕ್ಕಮಗಳೂರು, ಮೈಸೂರು ಕೋರ್ಟ್‌ಗಳಲ್ಲಿ ತೀವ್ರ ಪರಿಶೀಲನೆ

ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಚಿಕ್ಕಮಗಳೂರು, ಮೈಸೂರು ಕೋರ್ಟ್‌ಗಳಲ್ಲಿ ತೀವ್ರ ಪರಿಶೀಲನೆ

0
94

ಚಿಕ್ಕಮಗಳೂರು/ಮೈಸೂರು: ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ಇತ್ತೀಚೆಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬರುತ್ತಿರುವ ಬೆನ್ನಲ್ಲೇ, ಇದೀಗ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೂ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನ್ಯಾಯಾಲಯ ಆವರಣದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ.

ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾದ ಸಂದೇಶದಲ್ಲಿ, “ಮಧ್ಯಾಹ್ನ 1.30ರಿಂದ 3.30ರೊಳಗೆ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟಗೊಳಿಸಲಾಗುವುದು” ಎಂದು ಬೆದರಿಕೆ ಹಾಕಲಾಗಿದೆ. ಇ-ಮೇಲ್ ಗಮನಕ್ಕೆ ಬಂದ ತಕ್ಷಣ ನ್ಯಾಯಾಲಯದ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು

ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಧಾವಿಸಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದ ವೇಳೆಯಲ್ಲೇ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸಂಪೂರ್ಣ ನ್ಯಾಯಾಲಯ ಆವರಣವನ್ನು ಶೋಧಿಸಿದ್ದಾರೆ. ವಾಹನ ನಿಲುಗಡೆ ಪ್ರದೇಶ, ನ್ಯಾಯಾಲಯ ಕಟ್ಟಡ, ಸಾರ್ವಜನಿಕರ ನಿರೀಕ್ಷಣಾ ಸ್ಥಳ ಸೇರಿದಂತೆ ಪ್ರತಿಯೊಂದು ಭಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ.

ನ್ಯಾಯಾಲಯಕ್ಕೆ ಆಗಮಿಸುವ ಸಾರ್ವಜನಿಕರು, ಕಕ್ಷಿದಾರರು ಹಾಗೂ ಸಿಬ್ಬಂದಿಯನ್ನು ಕಟ್ಟುನಿಟ್ಟಿನ ತಪಾಸಣೆಯ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಈ ನಡುವೆ, ರಾಜ್ಯದ ಹಾವೇರಿ, ಮಂಡ್ಯ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಗಳಿಗೂ ಇದೇ ರೀತಿಯ ಬೆದರಿಕೆ ಇ-ಮೇಲ್‌ಗಳು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ: ಉಪನ್ಯಾಸಕನ ವಿರುದ್ಧ FIR

ಇದೇ ವೇಳೆ ಮೈಸೂರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಹಾಗೂ ಜಯನಗರದ ಕೌಟುಂಬಿಕ ನ್ಯಾಯಾಲಯಕ್ಕೂ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿದ್ದು, ಅಲ್ಲಿಯೂ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ವ್ಯಾಪಕ ತಪಾಸಣೆ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಫೋಟಗೊಂಡಿದ್ದ ಘಟನೆ ನಡೆದಿದ್ದರಿಂದ ಈ ಬಾರಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಬೆದರಿಕೆ ಸಂದೇಶ ಕಳುಹಿಸಿದ ಇ-ಮೇಲ್‌ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದು, ಸಂದೇಶದ ಹಿಂದಿರುವ ವ್ಯಕ್ತಿ ಅಥವಾ ಗುಂಪನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.