ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುತ್ತಿರುವ UGCET-2026 ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಇಚ್ಛೆ/ಆಯ್ಕೆಗಳ (Options) ದಾಖಲಾತಿ ಮಾಡದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದೆ. ಆಪ್ಷನ್ ದಾಖಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕ ಮುಕ್ತಾಯಗೊಂಡಿದ್ದರೂ, ಇದುವರೆಗೂ ತಮ್ಮ ಆಯ್ಕೆಗಳನ್ನು ದಾಖಲಿಸದ ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್, ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ (Mock Seat Allotment) ಫಲಿತಾಂಶ ಪ್ರಕಟವಾದ ಬಳಿಕ ಮತ್ತೊಮ್ಮೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ವಿಳಂಬ: ಜೈಪುರ ಕೇಂದ್ರದಲ್ಲಿ ಹೈಡ್ರಾಮಾ
ಹೀಗಾಗಿ, ಇದುವರೆಗೆ ಯಾವುದೇ ಕಾಲೇಜು ಅಥವಾ ಕೋರ್ಸ್‌ಗಳಿಗೆ ಆಯ್ಕೆಯನ್ನು ದಾಖಲಿಸದ ಅಭ್ಯರ್ಥಿಗಳು ಅಣಕು ಫಲಿತಾಂಶ ಪ್ರಕಟವಾಗುವವರೆಗೆ ತಮ್ಮ ಇಷ್ಟದ ಕಾಲೇಜುಗಳು ಹಾಗೂ ಕೋರ್ಸ್‌ಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಅಣಕು ಫಲಿತಾಂಶದ ಬಳಿಕ ಹೊಸದಾಗಿ ಆಪ್ಷನ್ ದಾಖಲಿಸಲು ಅವಕಾಶ : ಕೆಇಎ ನೀಡಿರುವ ಮಾಹಿತಿಯ ಪ್ರಕಾರ, ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶದ ನಂತರ ಅಭ್ಯರ್ಥಿಗಳಿಗೆ ಈಗಾಗಲೇ ದಾಖಲಿಸಿರುವ ಆಯ್ಕೆಗಳನ್ನು ಬದಲಾಯಿಸಲು, ಅಳಿಸಲು ಅಥವಾ ಹೊಸದಾಗಿ ಸೇರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದೇ ವೇಳೆ, ಇದುವರೆಗೆ ಯಾವುದೇ ಆಪ್ಷನ್ ದಾಖಲಿಸದ ಅಭ್ಯರ್ಥಿಗಳೂ ಕೂಡ ಈ ಅವಧಿಯಲ್ಲಿ ಹೊಸದಾಗಿ ತಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿದೆ.
ಇದನ್ನೂ ಓದಿ: WhatsAppನಲ್ಲಿ ಬಹುನಿರೀಕ್ಷಿತ ಫೀಚರ್ ಮಹತ್ವದ ಪ್ರೈವೆಸಿ ಅಪ್‌ಡೇಟ್
ಅಭ್ಯರ್ಥಿಗಳಿಗೆ ಕೆಇಎ ಸಲಹೆ : ಅಭ್ಯರ್ಥಿಗಳು ಅಣಕು ಫಲಿತಾಂಶ ಬರುವವರೆಗೆ ತಮ್ಮ ಇಷ್ಟದ ಕಾಲೇಜು ಮತ್ತು ಕೋರ್ಸ್‌ಗಳ ಆದ್ಯತಾ ಪಟ್ಟಿಯನ್ನು ಒಂದು ಕಡೆ ಬರೆದು ಸಿದ್ಧವಾಗಿಟ್ಟುಕೊಳ್ಳಬೇಕು. ಅಣಕು ಫಲಿತಾಂಶ ಪ್ರಕಟವಾದ ಬಳಿಕ ಲಭ್ಯವಾಗುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದು ಕೆಇಎ ತಿಳಿಸಿದೆ.
ವಿದ್ಯಾರ್ಥಿಗಳು ಯಾವುದೇ ಗೊಂದಲ ಅಥವಾ ಆತಂಕಕ್ಕೆ ಒಳಗಾಗದೆ, ಕೆಇಎ ಅಧಿಕೃತ ವೆಬ್‌ಸೈಟ್ ಮತ್ತು ಪ್ರಕಟಣೆಗಳನ್ನು ನಿರಂತರವಾಗಿ ಗಮನಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM
ಕೆಇಎಯ ಈ ಸ್ಪಷ್ಟನೆಯಿಂದ ಆಪ್ಷನ್ ದಾಖಲಿಸಲು ಸಾಧ್ಯವಾಗದ ಸಾವಿರಾರು ಅಭ್ಯರ್ಥಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.





















