ಭೋಪಾಲ್: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಕುಲ್ಪತ್ ಸಿಂಗ್ (37), ಸವಿತಾ ಸಿಂಗ್ (32), ಪ್ರಿಯಾಂಕಾ ಸಿಂಗ್ (24) ಹಾಗೂ ಮೂರು ವರ್ಷದ ರುದ್ರ ಪ್ರತಾಪ್ ಮೃತಪಟ್ಟವರೆಂದು ಗುರುತಿಸಲಾಗಿದೆ.
ಉಮಾರಿಯಾ ಜಿಲ್ಲೆಯ ಕೋತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಬಾಬಾ ದೇವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆದಲು ರಕ್ಷಣಾ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.
ಮೃತರು ಅನುಪುರ ಜಿಲ್ಲೆಯ ಲಿಲ್ಲಾತೋಲಾ ನಿವಾಸಿಗಳಾಗಿದ್ದು, ಸತ್ನಾ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಚಿತ್ರಕೂಟಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






















