SK Home Ad
Home ಸುದ್ದಿ ರಾಜ್ಯ ಆನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರೇ ಪರಿಹಾರ ಸೂಚಿಸಲಿ

ಆನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರೇ ಪರಿಹಾರ ಸೂಚಿಸಲಿ

0
2

ಕೋಲಾರ: ಬೇಲೂರು ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ಚಿಕ್ಕಮಗಳೂರು ಭಾಗದ ಶಾಸಕರ ಎಲ್ಲಿಗೆ ಸ್ಥಳಾಂತರಿದಬೇಕು ಎನ್ನುವ ಸಲಹೆಯನ್ನು ನೀಡಲಿ, ಅವರ ಅಭಿಪ್ರಾಯದಂತೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ತಾಲೂಕಿನಲ್ಲಿ ಪ್ರಸ್ತುತ ಸುಮಾರು 55 ಕಾಡಾನೆಗಳಿವೆ. ಆದರೆ, ಅಲ್ಲಿರುವುದು ಕೇವಲ 13,917 ಎಕರೆ ಅರಣ್ಯ ಪ್ರದೇಶ. ಅದೂ ಒಂದೇ ಕಡೆ ಇರದೆ ಕಾಫಿ ತೋಟಗಳ ನಡುವೆ ಚದುರಿಹೋಗಿದೆ. ಹೀಗಾಗಿ ಆನೆಗಳು ನಾಡಿಗೆ ಪ್ರವೇಶಿಸಿ ಬೆಳೆ ಹಾನಿ ಹಾಗೂ ಪ್ರಾಣಹಾನಿಗೆ ಕಾರಣವಾಗುತ್ತಿವೆ. 2019ರಲ್ಲಿ ಏಳು ಇದ್ದ ಆನೆಗಳ ಸಂಖ್ಯೆ ಈಗ 55ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಆನೆಗಳನ್ನು 1.41 ಲಕ್ಷ ಎಕರೆ ವಿಸ್ತೀರ್ಣದ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಈ ನಿರ್ಧಾರಕ್ಕೆ ಚಿಕ್ಕಮಗಳೂರು ಭಾಗದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ಸ್ಥಳಾಂತರಿಸಿದ ಬಳಿಕ ಅವು ಮತ್ತೆ ನಾಡಿಗೆ ಬಾರದಂತೆ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಶಾಸಕರು ಒಪ್ಪಿಲ್ಲ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಶಾಸಕರ ಸಭೆ ನಡೆಸಿ ಚರ್ಚಿಸಲಾಗುವುದು. ಬೇಲೂರು ಹಾಗೂ ಚಿಕ್ಕಮಗಳೂರು ಭಾಗದ ಜನರಿಗೆ ತೊಂದರೆಯಾಗದಂತೆ ಶಾಸಕರೇ ಸೂಕ್ತ ಸ್ಥಳಾಂತರದ ಆಯ್ಕೆ ಸೂಚಿಸಿದರೆ, ಅದರಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.