SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ ಬಿಗ್‌ ಟ್ವಿಸ್ಟ್: ಕ್ಯಾಪ್ಟನ್ಸಿಗಾಗಿ ಫಿನಾಲೆವರೆಗೆ ನಾಮಿನೇಟ್ ಮಾಡುವ ಸವಾಲು; ‘ಮೊದಲ ದ್ರೋಹ’ದ ಶಾಕ್!

ಬಿಗ್‌ ಬಾಸ್‌ ಬಿಗ್‌ ಟ್ವಿಸ್ಟ್: ಕ್ಯಾಪ್ಟನ್ಸಿಗಾಗಿ ಫಿನಾಲೆವರೆಗೆ ನಾಮಿನೇಟ್ ಮಾಡುವ ಸವಾಲು; ‘ಮೊದಲ ದ್ರೋಹ’ದ ಶಾಕ್!

0
6

BBK13: ‘ಬಿಗ್‌ ಬಾಸ್‌ ಕನ್ನಡ ಸೀಸನ್ 13’ರ ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಮನೆಯೊಳಗಿನ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದ ವಾರ ನಡೆದ ‘ಯುವರಾಣಿ-ಮಹಾರಾಣಿ’ ಟಾಸ್ಕ್‌ನಲ್ಲಿ ಗೆದ್ದು ಕ್ಯಾಪ್ಟನ್ ಆಗಿರುವ ಗಾನವಿ ಗೌಡ ಮತ್ತು ಅವರಿಗೆ ಸಾಥ್ ನೀಡಿ ಕ್ಯಾಪ್ಟನ್ ಪಟ್ಟಕ್ಕೇರಿದ ಗಗನ್‌ ಚಿನ್ನಪ್ಪ ಅವರಿಗೆ ಬಿಗ್‌ ಬಾಸ್‌ ಭಾರಿ ಟ್ವಿಸ್ಟ್‌ ನೀಡಿದ್ದಾರೆ.

ಮುಂದಿನ ವಾರವೂ ಕ್ಯಾಪ್ಟನ್ ಆಗಿ ಮುಂದುವರಿಯುವ ಅವಕಾಶದ ಜೊತೆಗೆ, ಮನೆಯ ಸದಸ್ಯರ ಪೈಕಿ ಒಬ್ಬರನ್ನು “ಅರ್ಹತೆಯಿಲ್ಲದವರು” ಎಂದು ಗುರುತಿಸಿ ಶಾಶ್ವತವಾಗಿ ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವ ಅಧಿಕಾರ ನೀಡಲಾಗಿದೆ. ಇದರಲ್ಲಿ ಟ್ವಿಸ್ಟ್‌ ಏನೆಂದರೆ, ಗಾನವಿ ಮತ್ತು ಗಗನ್‌ ಇಬ್ಬರಲ್ಲಿ ಯಾರು ಮೊದಲು ಬಜರ್‌ ಒತ್ತುತ್ತಾರೋ ಅವರಿಗೆ ಈ ನಿರ್ಧಾರ ಕೈಗೊಳ್ಳುವ ಅವಕಾಶ ಸಿಗಲಿದೆ. ಅಲ್ಲದೆ, ಆಯ್ಕೆಯಾಗುವ ಸದಸ್ಯರು ಫಿನಾಲೆ ಮುಗಿಯುವವರೆಗೆ ಅಂದರೆ ಇಡೀ ಸೀಸನ್‌ ಪೂರ್ತಿ ನಾಮಿನೇಟ್ ಆಗಿರುತ್ತಾರೆ ಎಂಬ ಕಠಿಣ ನಿಯಮವನ್ನೂ ವಿಧಿಸಲಾಗಿದೆ.

ಗಾನವಿ ಮತ್ತು ಗಗನ್‌ ತೆಗೆದುಕೊಳ್ಳುವ ಈ ನಿರ್ಧಾರವು ಮನೆಯ ವಾತಾವರಣದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದ್ದು, ಇಂತಹ ಆಯ್ಕೆಯಿಂದ ಮನೆಯೊಳಗೆ ನಿರಾಶೆ ಮೂಡಬಹುದು ಎಂಬ ಆತಂಕವನ್ನು ಗಾನವಿ ವ್ಯಕ್ತಪಡಿಸಿದ್ದಾರೆ. ಇದರ ನಡುವೆ, ಬಿಡುಗಡೆಯಾದ ಪ್ರೋಮೋದಲ್ಲಿ ‘ಆರದ ಗಾಯ’, ‘ಮಿತ್ರದ್ರೋಹಿ’, ‘ಮುಖವಾಡ’ ಮತ್ತು ‘ದ್ರೋಹಿ’ ಎಂಬ ಟ್ಯಾಗ್‌ಗಳನ್ನು ನೀಡುವ ಘಟ್ಟವೂ ಕಾಣಿಸಿಕೊಂಡಿದೆ.

ಮನೆಯೊಳಗೆ ಈಗಾಗಲೇ “ಮೊದಲ ದ್ರೋಹ” ನಡೆದಿದೆ ಎಂದು ಬಿಗ್‌ ಬಾಸ್‌ ಹೇಳಿರುವುದು ಸ್ಪರ್ಧಿಗಳಿಗೆ ದೊಡ್ಡ ಶಾಕ್‌ ನೀಡಿದೆ. ಕ್ಯಾಪ್ಟನ್ಸಿ ಉಳಿಸಿಕೊಳ್ಳುವ ಲೆಕ್ಕಾಚಾರ ಮತ್ತು ಸ್ನೇಹ-ನಂಬಿಕೆಗಳ ನಡುವಿನ ತಿಕ್ಕಾಟದಲ್ಲಿ ಯಾರು ಯಾರಿಗೆ ದ್ರೋಹ ಬಗೆದರು, ಮುಂದಿನ ದಿನಗಳಲ್ಲಿ ಯಾವ ತಿರುವುಗಳು ಸಿಗಲಿವೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.