BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದ ‘ಮಾಡ್ರನ್ ಮಹಾಕವಿ’ ಮಂಜ ಎರಡನೇ ಇನ್ನಿಂಗ್ಸ್ಗೆ ತೆರೆಬಿದ್ದಿದೆ. ನವೆಂಬರ್ 22ರ ಭಾನುವಾರದ ವೀಕೆಂಡ್ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಮಂಜ ಅವರನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ.
ಈ ವಾರ ದೊಡ್ಮನೆಯಲ್ಲಿ ಯಾವುದೇ ಸಾಮಾನ್ಯ ಎಲಿಮಿನೇಷನ್ ಇರಲಿಲ್ಲ. ಬದಲಾಗಿ, ಕಳೆದ ಮೂರು ವಾರಗಳಿಂದ ಅತಿಥಿಯಾಗಿ ಮನೆಯ ಸತ್ಕಾರ ಸ್ವೀಕರಿಸುತ್ತಿದ್ದ ಮಂಜ ಅವರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕಳುಹಿಸಲಾಯಿತು. ಮಂಜ ಮನೆಯಿಂದ ಹೊರನಡೆಯುವ ಸುದ್ದಿ ಕೇಳುತ್ತಿದ್ದಂತೆಯೇ ಸಹಸ್ಪರ್ಧಿ ಗಾನವಿ ಗೌಡ ತೀವ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. “ಕೊನೆ ತನಕ ಇರುತ್ತೇನೆ ಎಂದು ಮಾತು ಕೊಟ್ಟು ಈಗ ಅರ್ಧದಲ್ಲೇ ಹೋಗುತ್ತಿದ್ದೀಯ” ಎಂದು ಗಾನವಿ ನೋವು ತೋಡಿಕೊಂಡರು. ಇಡೀ ಮನೆಯಲ್ಲಿ ತನಗೆ ಬೆಂಬಲವಾಗಿ ನಿಂತಿದ್ದ ಏಕೈಕ ವ್ಯಕ್ತಿ ಹೊರಹೋಗುತ್ತಿರುವುದು ಗಾನವಿಗೆ ದೊಡ್ಡ ಆಘಾತ ನೀಡಿದೆ.
‘ಅಗ್ನಿಪರೀಕ್ಷೆ’ಯ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜ, ಮೊದಲ ಇನ್ನಿಂಗ್ಸ್ನಲ್ಲಿ ಅಸಭ್ಯ ವರ್ತನೆ ತೋರಿದ ಕಾರಣ ರೆಡ್ ಕಾರ್ಡ್ ಪಡೆದು ಹೊರಬಂದಿದ್ದರು. ಆದರೆ, ವೇದಿಕೆಯ ಮೇಲೆ ಅವರ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪ ಕಂಡ ಸುದೀಪ್, ಕೇವಲ ಅತಿಥಿಯಾಗಿ ಮನೆಗೆ ಮರಳಲು ಮತ್ತೊಂದು ಅವಕಾಶ ನೀಡಿದ್ದರು. ಅದರಂತೆ ಮಂಜ ತಮ್ಮ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಎಲ್ಲರೊಂದಿಗೆ ಬೆರೆತಿದ್ದರು.
ಮಂಜ ಅವರನ್ನು ಹೊರಗೆ ಕರೆಯುವ ಮುನ್ನ ಸ್ಪರ್ಧಿಗಳೊಂದಿಗೆ ಮಾತನಾಡಿದ ಸುದೀಪ್, “ಎಲ್ಲರೂ ತಪ್ಪು ಮಾಡುತ್ತಾರೆ. ರೆಡ್ ಕಾರ್ಡ್ ನೀಡಿ ಸ್ಪರ್ಧಿಯ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ. ಮನೆಯಿಂದ ಹೊರಹೋಗುವ ಪ್ರತಿಯೊಬ್ಬರಿಗೂ ಒಂದು ಸುಂದರ ನೆನಪು ಮತ್ತು ಒಳ್ಳೆಯ ಜರ್ನಿ ವಿಡಿಯೋ (ವಿಟಿ) ಇರಬೇಕು ಎಂಬುದು ನನ್ನ ಆಸೆ. ಆ ಭರವಸೆಯನ್ನು ಈಡೇರಿಸಲಷ್ಟೇ ನನ್ನ ವೈಯಕ್ತಿಕ ಆಯ್ಕೆಯ ಮೇಲೆ ಅವರಿಗೆ ಮತ್ತೊಂದು ಅವಕಾಶ ನೀಡಿದ್ದೆ” ಎಂದು ಸ್ಪಷ್ಟಪಡಿಸಿದರು.






















