SK Home Ad
Home ಸುದ್ದಿ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆರನೇ ದಿನ; ಗ್ಯಾರಂಟಿ ಬೇಡ, ಅಧಿಕೃತ ಆದೇಶಕ್ಕೆ ಪಟ್ಟು!

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆರನೇ ದಿನ; ಗ್ಯಾರಂಟಿ ಬೇಡ, ಅಧಿಕೃತ ಆದೇಶಕ್ಕೆ ಪಟ್ಟು!

0
5

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಮಾಸಿಕ ಗೌರವಧನ ಹಾಗೂ ಬಾಕಿ ಪ್ರೋತ್ಸಾಹಧನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತೆಯರು ಹೋರಾಟ ಮುಂದುವರಿಸಿದ್ದಾರೆ.

ಹಿಂದೆ ನೀಡಿದ್ದ ಭರವಸೆಗಳು ಮೂರೂವರೆ ವರ್ಷ ಕಳೆದರೂ ಈಡೇರಿಲ್ಲ ಎಂಬುದು ಪ್ರತಿಭಟನಾಕಾರರ ಅಸಮಾಧಾನಕ್ಕೆ ಕಾರಣವಾಗಿದೆ. ಕೇವಲ ಭರವಸೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

ಬೇಡಿಕೆ ಪರಿಶೀಲಿಸಲು ಇನ್ನೂ ಸ್ವಲ್ಪ ಸಮಯ ಬೇಕು ಎಂಬ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಆಶಾ ಕಾರ್ಯಕರ್ತೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಈಗಾಗಲೇ ಒಂದೂವರೆ ವರ್ಷ ಕಾದಿದ್ದೇವೆ, ಸರ್ಕಾರದೊಂದಿಗೆ ನಡೆಸಬಹುದಾದ ಎಲ್ಲಾ ಹಂತದ ಚರ್ಚೆಗಳೂ ಮುಗಿದಿವೆ. ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದೇವೆ, ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ” ಎಂದು  ಪ್ರತಿಭಟನೆ ನಿಲ್ಲಿಸುವುದಿಲ್ಲ, ಸರಕಾರ ಆದೇಶ ಪ್ರತಿ ನೀಡಬೇಕು ಎಂಬ ಒತ್ತಾಯ ಮಾಡುತ್ತಿದ್ದಾರೆ.

ಈ ಹಿಂದೆ 2025ರ ಜನವರಿ 10ರಂದು ನಾಲ್ಕು ದಿನಗಳ ಪ್ರತಿಭಟನೆ ನಡೆಸಿದ್ದಾಗ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಸಿಕ ಗೌರವಧನವನ್ನ 10,000 ರೂಪಾಯಿಗೆ ಏರಿಸುವುದಾಗಿ ಭರವಸೆ ನೀಡಿದ್ದರು.
ಅಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಕೂಡ ಕಾಂಗ್ರೆಸ್ ಸರ್ಕಾರ ಆಶಾ ಕಾರ್ಯಕರ್ತೆಯರ ಪರವಾಗಿದೆ ಎಂದು ಗೌರವಧನ ಹೆಚ್ಚಳದ ಭರವಸೆಯನ್ನ ವ್ಯಾಪಕವಾಗಿ ಪ್ರಚಾರ ಮಾಡಿದ್ದರು ಎಂಬುದನ್ನ ಕಾರ್ಯಕರ್ತೆಯರು ನೆನಪಿಸಿದ್ದಾರೆ.

ಸತತ ಮನವಿ, ಬೆಳಗಾವಿ ಅಧಿವೇಶನದಲ್ಲೂ ಹೋರಾಟ: ಸರ್ಕಾರದ ವಾದಕ್ಕೆ ತಿರುಗೇಟು ಕೊಟ್ಟ ಭರವಸೆಯನ್ನ ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ನೆನಪಿಸಲಾಗಿದೆ. 2025ರ ಡಿಸೆಂಬರ್ 10ರಂದು ನಡೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ, ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ 2026ರ ಆಗಸ್ಟ್ 18ರಂದು ಸಭೆ ನಡೆಸಿ ಮನವಿ ಸಲ್ಲಿಸಲಾಗಿತ್ತು.

ನವೆಂಬರ್ 2ರಂದೇ ಮುಖ್ಯಮಂತ್ರಿ ಕಚೇರಿ, ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮುಷ್ಕರದ ನೋಟಿಸ್ ನೀಡಲಾಗಿತ್ತು. ಇಷ್ಟೆಲ್ಲಾ ಸುದೀರ್ಘ ಚರ್ಚೆಗಳ ಬಳಿಕವೂ ಸರ್ಕಾರ ಮತ್ತೆ ಸಮಯ ಕೇಳುತ್ತಿರುವುದು ಎಷ್ಟು ಸರಿ ಎಂದು ಕಾರ್ಯಕರ್ತೆಯರು ಪ್ರಶ್ನಿಸಿದ್ದಾರೆ.
 
ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.