ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಮೆಟ್ರೋ ಯೋಜನೆಗಳಲ್ಲಿ ಒಂದಾದ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗದ ಕಾಮಗಾರಿ ಆರಂಭಕ್ಕೂ ಮುನ್ನವೇ ವಿಳಂಬದ ಸುಳಿಗೆ ಸಿಲುಕಿದೆ. ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಗದ ಕಾರಣ, ಕಾಮಗಾರಿ ಪೂರ್ಣಗೊಳಿಸುವ ಗಡುವು 2031ರಿಂದ 2033ಕ್ಕೆ ಮುಂದೂಡುವ ಸಾಧ್ಯತೆ ಎದುರಾಗಿದೆ.
ಇತ್ತೀಚೆಗೆ ಗುಲಾಬಿ ಮೆಟ್ರೋ ಮಾರ್ಗದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೆಂಪು ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಹಳದಿ ಮತ್ತು ನೀಲಿ ಮಾರ್ಗಗಳ ಬಳಿಕ ನಗರದ ಪ್ರಮುಖ ಐಟಿ ಕೇಂದ್ರಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆ ಇದಾಗಿದ್ದು, ಸರ್ಜಾಪುರದಿಂದ ಹೆಬ್ಬಾಳದವರೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ.
ಆಗ್ನೇಯ ಬೆಂಗಳೂರಿನ ಸರ್ಜಾಪುರವನ್ನು ಉತ್ತರ ಬೆಂಗಳೂರಿನ ಹೆಬ್ಬಾಳದೊಂದಿಗೆ ಸಂಪರ್ಕಿಸುವ ಈ ಮಾರ್ಗವು ಕೋರಮಂಗಲ, ಶಾಂತಿನಗರ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗಲಿದೆ. ಇದರಿಂದ ನಗರದ ಪೂರ್ವ ಮತ್ತು ಉತ್ತರ ಭಾಗಗಳ ನಡುವೆ ಸಂಚಾರ ಸುಗಮವಾಗುವ ನಿರೀಕ್ಷೆಯಿದೆ. ಆದರೆ, ಯೋಜನೆಯ ಅನುಮೋದನೆಯಲ್ಲಿನ ವಿಳಂಬದಿಂದ ಈ ಸೌಲಭ್ಯ ಪಡೆಯಲು ಜನರು ಇನ್ನಷ್ಟು ವರ್ಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಲ್ಕೂವರೆ ವರ್ಷಗಳಿಂದ ಹೊಸ ಕಾಮಗಾರಿಯೇ ಇಲ್ಲ
ಬೆಂಗಳೂರು ಮೆಟ್ರೋ ವಿಸ್ತರಣೆಯ ವೇಗದ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ. 2024ರ ಆಗಸ್ಟ್ನಲ್ಲಿ ಮೂರನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರದ ಅನುಮೋದನೆ ದೊರೆತಿತ್ತು. ಆದರೆ, ಭೂಸ್ವಾಧೀನ ಹೊರತುಪಡಿಸಿ ನಿರ್ಮಾಣ ಕಾಮಗಾರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ.
ಒಟ್ಟಾರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ಹೊಸ ಮೆಟ್ರೋ ಮಾರ್ಗದ ನಿರ್ಮಾಣ ಕಾಮಗಾರಿ ಆರಂಭವಾಗದಿರುವುದು ನಗರದ ಸಾರ್ವಜನಿಕ ಸಾರಿಗೆ ವಿಸ್ತರಣೆಯಲ್ಲಿನ ವಿಳಂಬವನ್ನು ಎತ್ತಿ ತೋರಿಸಿದೆ.




















