Home Advertisement
Home ಸಿನಿ ಮಿಲ್ಸ್ Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್

Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್

0
71

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್’: A Fairy Tale for Grown-Ups ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಜಾಗತಿಕ ಮಟ್ಟದಲ್ಲಿ ಭರ್ಜರಿ ಬಿಡುಗಡೆಯನ್ನು ಗುರಿಯಾಗಿಸಿಕೊಂಡಿರುವ ಚಿತ್ರತಂಡ, ಬಿಡುಗಡೆ ದಿನಾಂಕವನ್ನು ಮರುನಿಗದಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಈ ಸಿನಿಮಾ ಆರಂಭದಲ್ಲಿ 2025ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ನಂತರ ಅದನ್ನು 2026ರ ಮಾರ್ಚ್ 19ಕ್ಕೆ ಮುಂದೂಡಲಾಗಿತ್ತು. ಆದರೆ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಇನ್ನೂ ಹೆಚ್ಚಿನ ಸಮಯದ ಅಗತ್ಯ ಇರುವ ಹಿನ್ನೆಲೆಯಲ್ಲಿ ಚಿತ್ರವನ್ನು ಮತ್ತೆ ಮುಂದೂಡಲಾಗಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಜಾಗತಿಕ ವಿತರಣೆ, ಅಂತರಾಷ್ಟ್ರೀಯ ಸಹಭಾಗಿತ್ವ ಹಾಗೂ ವಿಭಿನ್ನ ದೇಶಗಳ ಮಾರುಕಟ್ಟೆಗಳಿಗೆ ತಕ್ಕಂತೆ ಬಿಡುಗಡೆ ಯೋಜನೆ ರೂಪಿಸುವ ಕಾರ್ಯದಲ್ಲಿ ತಂಡ ನಿರತರಾಗಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಬದಲಾವಣೆ ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ನಟ ಯಶ್‌ “ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳು ಅದನ್ನು ಕೇಳುತ್ತವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ವಿಶ್ವದಾದ್ಯಂತ ಪ್ರೇಕ್ಷಕರಿಗೆ ಅತ್ಯುತ್ತಮ ಅನುಭವ ನೀಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ ಸದಾ ನನ್ನೊಂದಿಗಿದೆ ಇರಲಿ” ಎಂದು ಹೇಳಿದ್ದಾರೆ.

ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಕಥೆ ಬರವಣಿಗೆಯಲ್ಲಿಯೂ ಯಶ್ ಜೊತೆ ಕೈಜೋಡಿಸಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN) ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ.

ಈ ಬಹುನಿರೀಕ್ಷಿತ ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿ ಭಾರತೀಯ ಚಿತ್ರರಂಗದ ಗಣ್ಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ. ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟವನ್ನು ಮೀರಿಸಿ ಪ್ಯಾನ್-ವರ್ಡ್ ಸಿನಿಮಾ ಆಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.