ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾಗೂ ದೃಶ್ಯ ವೈಭವದ ಮಹಾಕಾವ್ಯ ‘ರಾಮಾಯಣ ಪಾರ್ಟ್ 1’ ಇದೀಗ ಜಾಗತಿಕ ರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ನಿತೀಶ್ ತಿವಾರಿ ನಿರ್ದೇಶನದ ಈ ಸಿನಿಮಾವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಆಸ್ಕರ್ ರೇಸ್ಗಾಗಿ ‘ಜನರಲ್ ಎಂಟ್ರಿ’ ವಿಭಾಗದಲ್ಲಿ ಅಧಿಕೃತವಾಗಿ ಸಲ್ಲಿಸಿದ್ದಾರೆ.
ಭಾರತದಿಂದ ಆಸ್ಕರ್ಗೆ ಅಧಿಕೃತವಾಗಿ ಮರಾಠಿಯ ‘ಗೋಂಧಲ್’ ಸಿನಿಮಾ ಆಯ್ಕೆಯಾಗಿದ್ದರೂ, ಅಕಾಡೆಮಿ ನಿಯಮಗಳ ಪ್ರಕಾರ ಅಮೆರಿಕದ ಪ್ರಮುಖ ನಗರಗಳಲ್ಲಿ ಕನಿಷ್ಠ 7 ದಿನ ಪ್ರದರ್ಶನ ಕಂಡ ಚಿತ್ರಗಳು ಸ್ವತಂತ್ರವಾಗಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತವೆ. ಈ ನಿಯಮವನ್ನು ಪೂರೈಸಿರುವ ನಿರ್ಮಾಪಕರು ‘ರಾಮಾಯಣ’ ಚಿತ್ರವನ್ನು ನೇರವಾಗಿ ಆಸ್ಕರ್ ಅಂಗಳಕ್ಕೆ ಒಯ್ದಿದ್ದಾರೆ.
ಈ ಬ್ರಹ್ಮಾಂಡ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸನ್ನಿ ಡಿಯೋಲ್ ಹಾಗೂ ರವಿ ದುಬೆ ಸೇರಿದಂತೆ ಬೃಹತ್ ತಾರಾಗಣವೇ ಚಿತ್ರದಲ್ಲಿದೆ. ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನ ಹಾಗೂ ಅದ್ಭುತ ದೃಶ್ಯ ಸಂಯೋಜನೆಯಿಂದ ಕೂಡಿರುವ ಈ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಜಾಗತಿಕ ಮಟ್ಟದ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸಿನಿಮಾ ಎಷ್ಟರಮಟ್ಟಿಗೆ ಮ್ಯಾಜಿಕ್ ಮಾಡಲಿದೆ ಎಂದು ಕಾದು ನೋಡಬೇಕಿದೆ.





















