ಬೆಂಗಳೂರು: ಕನ್ನಡ ಸಂಗೀತಾಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ‘ಖುಷಿಯಾಗಿದೆ ಏಕೋ ನಿನ್ನಿಂದಲೇ’ ಹಾಡಿನ ಮೂಲಕ ಮನೆಮಾತಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಅಜಯ್ ರಾವ್ ಅಭಿನಯದ ಬಹುನಿರೀಕ್ಷಿತ ‘ಪಾರ್ಟ್ನರ್’ ಚಿತ್ರದ ಮೊದಲ ಸಿಂಗಲ್ ‘ಅಮೋರಾ’ ಹಾಡಿಗೆ ಧ್ವನಿ ನೀಡುವ ಮೂಲಕ ಅವರು ಮತ್ತೆ ಕನ್ನಡ ಸಿನಿರಸಿಕರ ಮನ ಗೆದ್ದಿದ್ದಾರೆ.
ಈ ಹಾಡು ಈಗಾಗಲೇ ಆನಂದ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವು ವರ್ಷಗಳ ನಂತರ ಕುನಾಲ್ ಗಾಂಜಾವಾಲ ಅವರ ಮಧುರ ಧ್ವನಿ ಕನ್ನಡದ ರೊಮ್ಯಾಂಟಿಕ್ ಹಾಡಿನಲ್ಲಿ ಕೇಳಿಬಂದಿರುವುದು ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.
‘ಅಮೋರಾ’ ಹಾಡಿಗೆ ಯುವ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ಮಾಡಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ‘ಹೃದಯಕೊಂದು ಕಲ್ಲು ಹೊಡೆದ ಕೇಡಿ ನೀನೆ…’ ಎಂಬ ಸಾಲುಗಳಿಂದ ಕೂಡಿದ ಈ ಮೆಲೋಡಿ ಹಾಡು ಪ್ರೇಮದ ಭಾವನೆಗಳನ್ನು ಸುಂದರವಾಗಿ ಅಭಿವ್ಯಕ್ತಿಸುತ್ತದೆ. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ದೃಶ್ಯ ವೈಭವವೂ ಗಮನ ಸೆಳೆಯುತ್ತಿದೆ.
2000ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದ ಕುನಾಲ್ ಗಾಂಜಾವಾಲ, ‘ತಾಜ್‌ಮಹಲ್’, ‘ಆಕಾಶ್’, ‘ಐಶ್ವರ್ಯ’, ‘ಅರಸು’, ‘ಮುಂಗಾರು ಮಳೆ’, ‘ಮಿಲನ’, ‘ಅರಮನೆ’, ‘ಚಾರ್ಮಿನಾರ್’, ‘ಶೌರ್ಯ’ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಅವರ ಭಾವಪೂರ್ಣ ಗಾಯನ ಶೈಲಿ ಹಾಗೂ ಮೆಲೋಡಿ ಹಾಡುಗಳಿಗೆ ನೀಡುವ ಜೀವಂತಿಕೆ ಕನ್ನಡ ಸಿನಿಪ್ರಿಯರನ್ನು ಸದಾ ಸೆಳೆದಿದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕುನಾಲ್ ಗಾಂಜಾವಾಲ ಅವರ ಹಾಡುಗಳು ಕಡಿಮೆಯಾಗಿದ್ದರೂ, ಈಗ ‘ಪಾರ್ಟ್ನರ್’ ಚಿತ್ರದ ಮೂಲಕ ಅವರ ಮರಳುವಿಕೆ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಅಜಯ್ ರಾವ್ ಮತ್ತು ಕುನಾಲ್ ಗಾಂಜಾವಾಲ ಅವರ ಹಿಂದಿನ ಹಿಟ್ ಸಂಯೋಜನೆಗಳನ್ನು ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು, ಈ ಹಾಡು ಕೂಡ ಮತ್ತೊಂದು ಸೂಪರ್ ಹಿಟ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
‘ಪಾರ್ಟ್ನರ್’ ಚಿತ್ರದಲ್ಲಿ ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲ ಹಾಡಿನ ಮೂಲಕವೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.






















