SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಿವಿ ಕೊಡುಗೆ: 6 ಹೊಸ ಕೌಶಲ್ಯಾಧಾರಿತ ಕೋರ್ಸ್‌ಗಳು

ದಾವಣಗೆರೆ ವಿವಿ ಕೊಡುಗೆ: 6 ಹೊಸ ಕೌಶಲ್ಯಾಧಾರಿತ ಕೋರ್ಸ್‌ಗಳು

0
66

ದಾವಣಗೆರೆ ವಿಶ್ವವಿದ್ಯಾಲಯದಿಂದ 6 ನೂತನ ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ : ಸೈಬರ್ ಸೆಕ್ಯುರಿಟಿಯಿಂದ ಯೋಗಿಕ್ ಸೈನ್ಸ್‌ವರೆಗೆ 6 ಹೊಸ ಕೋರ್ಸ್‌ಗಳು – ಪ್ರವೇಶಾತಿ ಆರಂಭ

ದಾವಣಗೆರೆ: ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾಲಯವು 2026-27ನೇ ಶೈಕ್ಷಣಿಕ ವರ್ಷದಿಂದ ಮೊದಲ ಬಾರಿಗೆ ಆರು ನೂತನ ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸುತ್ತಿದೆ. ಜೊತೆಗೆ ವಿಶ್ವವಿದ್ಯಾಲಯದ ಪ್ರಯೋಗಾಲಯಗಳನ್ನು ಆಧುನೀಕರಿಸಿ ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಧಾರವನ್ನೂ ಕೈಗೊಂಡಿದೆ.

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಇ. ರಂಗಸ್ವಾಮಿ, ಹೊಸ ಶಿಕ್ಷಣ ನೀತಿ ಹಾಗೂ ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಆರು ಹೊಸ ಕೋರ್ಸ್‌ಗಳ ಆರಂಭ : ಶೈಕ್ಷಣಿಕ ವರ್ಷದಿಂದ ಕೆಳಕಂಡ ಹೊಸ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಲಿದೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಹೊಸ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ನೆರವಾಗಲಿವೆ ಎಂದು ಅವರು ತಿಳಿಸಿದರು.

ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯುರಿಟಿ – ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್ ವಿಭಾಗ
ಪಿಜಿ ಡಿಪ್ಲೊಮಾ ಇನ್ ಫೈನಾನ್ಷಿಯಲ್ ಸರ್ವಿಸಸ್ – ವಾಣಿಜ್ಯಶಾಸ್ತ್ರ ವಿಭಾಗ
ಪಿಜಿ ಡಿಪ್ಲೊಮಾ ಇನ್ ಡೇಟಾ ಅನಾಲಿಸಿಸ್ – ಅರ್ಥಶಾಸ್ತ್ರ ವಿಭಾಗ
ಪಿಜಿ ಡಿಪ್ಲೊಮಾ ಇನ್ ಫುಡ್ ಪ್ರೊಸೆಸಿಂಗ್, ಸೇಫ್ಟಿ ಅಂಡ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ – ಫುಡ್ ಟೆಕ್ನಾಲಜಿ ವಿಭಾಗ
ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್
ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗಿಕ್ ಸೈನ್ಸ್

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ : ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆ (PMKKY) ಅಡಿಯಲ್ಲಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಿದ ಯುವಕ-ಯುವತಿಯರಿಗಾಗಿ ಕಾರ್ಪೆಂಟ್ರಿ, ಮೇಸಂಡ್ರಿ, ಎಲೆಕ್ಟ್ರಿಕಲ್ ವೈಂಡಿಂಗ್ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ದಾವಣಗೆರೆ, ಚಿತ್ರದುರ್ಗ ಹಾಗೂ ಹಿರಿಯೂರು ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ.

ಪ್ರಯೋಗಾಲಯಗಳ ಆಧುನೀಕರಣ : ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಯೋಗಾಲಯಗಳನ್ನು ಆಧುನೀಕರಿಸಿ, ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆ ಹಾಗೂ ಪ್ರಾಯೋಗಿಕ ಕಲಿಕೆಗೆ ಉತ್ತಮ ಅವಕಾಶಗಳು ದೊರೆಯಲಿವೆ.

ಉದ್ಯೋಗ ಸೃಷ್ಟಿಕರ್ತರನ್ನಾಗಿ ರೂಪಿಸುವ ಗುರಿ : ಇಂದಿನ ಕೈಗಾರಿಕೆ ಹಾಗೂ ಕಾರ್ಪೊರೇಟ್ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿವರ್ಷ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆಗಳನ್ನು ತರಲಾಗುವುದು ಎಂದು ಉಪಕುಲಪತಿ ತಿಳಿಸಿದರು. “ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೇ, ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂಬುದು ನಮ್ಮ ಗುರಿಯಾಗಿದೆ.

ಈ ನಿಟ್ಟಿನಲ್ಲಿ ವಿವಿಧ ಕೈಗಾರಿಕೆಗಳು ಹಾಗೂ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಷ್ಟೇ ಅಲ್ಲದೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಹಾಗೂ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಪ್ಲೇಸ್‌ಮೆಂಟ್ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದ ಈ ಹೊಸ ಶೈಕ್ಷಣಿಕ ಕ್ರಮವು ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿ, ಉದ್ಯೋಗಾರ್ಹತೆ ಹಾಗೂ ಉದ್ಯಮಶೀಲತೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.