SK Home Ad
Home ಸಿನಿ ಮಿಲ್ಸ್ ಸೆಪ್ಟೆಂಬರ್ 14ರಂದು ಗಣೇಶ ಪ್ರತಿಷ್ಠಾಪನೆ: ಶುಭ ಪೂಜಾ ಮುಹೂರ್ತದ ವಿವರ ಇಲ್ಲಿದೆ..

ಸೆಪ್ಟೆಂಬರ್ 14ರಂದು ಗಣೇಶ ಪ್ರತಿಷ್ಠಾಪನೆ: ಶುಭ ಪೂಜಾ ಮುಹೂರ್ತದ ವಿವರ ಇಲ್ಲಿದೆ..

0
11

ಬೆಂಗಳೂರು: ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದ್ದು, ವಿಘ್ನನಿವಾರಕನ ಪ್ರತಿಷ್ಠಾಪನೆಗೆ ಭಕ್ತಾದಿಗಳು ಭರಪೂರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮನೆ ಹಾಗೂ ಸಾರ್ವಜನಿಕ ಪಂದಲ್‍ಗಳಲ್ಲಿ ಪೂಜಾ ಸ್ಥಳವನ್ನು ನೀಟಾಗಿ ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ಹೂವುಗಳು ಹಾಗೂ ದೀಪಗಳಿಂದ ಆಕರ್ಷಕ ಮಂಟಪಗಳನ್ನು ಅಲಂಕರಿಸಲಾಗುತ್ತಿದೆ. ಗಣೇಶನಿಗೆ ಪ್ರಿಯವಾದ ಮೋದಕ, ವಿವಿಧ ಬಗೆಯ ಹಣ್ಣು-ಹಂಪಲುಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಭಕ್ತರು ನಿರತರಾಗಿದ್ದಾರೆ.

ಪೂಜಾ ಮುಹೂರ್ತ: ಸೆಪ್ಟೆಂಬರ್ 14ರಂದು ಬೆಳಗಿನ ಜಾವದಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ. ಪ್ರತಿಷ್ಠಾಪನೆ ಹಾಗೂ ಪೂಜೆಗೆ ಬೆಳಗ್ಗೆ 11:02ರಿಂದ ಮಧ್ಯಾಹ್ನ 1:21ರವರೆಗಿನ ಸಮಯ ಅತ್ಯಂತ ಶುಭಕರವಾಗಿದೆ ಎಂದು ತಿಳಿಸಲಾಗಿದೆ. ಈ ನಿರ್ದಿಷ್ಟ ಸಮಯದ ಅವಧಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಪರಿಸರ ಸ್ನೇಹಿ ಗಣಪ: ಈ ಬಾರಿ ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಭಕ್ತರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸುವಂತೆ ಮನವಿ ಮಾಡಲಾಗಿದೆ. ರಾಸಾಯನಿಕ ಬಣ್ಣಗಳಿಂದ ಕೂಡಿದ ಮೂರ್ತಿಗಳನ್ನು ತಡೆದು, ನೈಸರ್ಗಿಕ ಮಣ್ಣಿನ ಮೂರ್ತಿಗಳನ್ನು ಆರಾಧಿಸುವುದರಿಂದ ಜಲಮೂಲಗಳ ಮಾಲಿನ್ಯವನ್ನು ತಡೆಯಬಹುದಾಗಿದೆ.

ಪೂಜೆಯ ನಂತರ ಮೂರ್ತಿ ವಿಸರ್ಜನೆಯನ್ನು ಸಹ ಸೂಕ್ತ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲಿಯೇ ಬಕೆಟ್ ಅಥವಾ ಸಣ್ಣ ತೊಟ್ಟಿಯಲ್ಲಿ ನೀರು ತುಂಬಿ ವಿಸರ್ಜನೆ ಮಾಡುವುದು ಸೂಕ್ತ. ಹೀಗೆ ಕರಗಿದ ಮಣ್ಣನ್ನು ಮನೆಯಲ್ಲಿರುವ ಗಿಡಗಳು ಅಥವಾ ಕುಂಡಗಳಿಗೆ ಬಳಸಿಕೊಳ್ಳುವ ಮೂಲಕ ಸಂಪೂರ್ಣ ಪರಿಸರ ಸ್ನೇಹಿ ರೀತಿಯಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬಹುದು.