SK Home Ad
Home ಸಿನಿ ಮಿಲ್ಸ್ ಗ್ಲಾಮರಸ್ ಲುಕ್‌ನಲ್ಲಿ ನಿವೇದಿತಾ ಗೌಡ: ‘ಬೇಲ್’ ಚಿತ್ರದ ‘ಕುಮಾರಿ’ ಹಾಡು ರಿಲೀಸ್

ಗ್ಲಾಮರಸ್ ಲುಕ್‌ನಲ್ಲಿ ನಿವೇದಿತಾ ಗೌಡ: ‘ಬೇಲ್’ ಚಿತ್ರದ ‘ಕುಮಾರಿ’ ಹಾಡು ರಿಲೀಸ್

0
49
‘ಬೇಲ್’ ಚಿತ್ರದ ‘ಕುಮಾರಿ’ ಸಾಂಗ್ ಔಟ್; ನಿವೇದಿತಾ ಗೌಡ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾ ಬಿಡುಗಡೆಗೂ ಮುನ್ನವೇ ಒಂದೊಂದೇ ಅಪ್‌ಡೇಟ್‌ಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್ ಈಗಾಗಲೇ ಕುತೂಹಲ ಮೂಡಿಸಿದ್ದು, ಇದೀಗ ‘ಕುಮಾರಿ’ ಎಂಬ ಹೊಸ ಹಾಡು ಬಿಡುಗಡೆಯಾಗಿದೆ.

‘ಕುಮಾರಿ’ ಹಾಡಿನ ವಿಶೇಷ ಆಕರ್ಷಣೆಯಾಗಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಅವರು ಗ್ಲಾಮರಸ್ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದು, ಅವರ ಡ್ಯಾನ್ಸ್ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ‘ಲೂಸ್ ಮಾದ’ ಯೋಗಿ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಹಾಡಿನ ಬಿಡುಗಡೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಬೇಲ್’ ಚಿತ್ರದ ಈ ವಿಶೇಷ ಗೀತೆಯ ಬಗ್ಗೆ ಚರ್ಚೆ ಆರಂಭವಾಗಿದೆ.

ಇದಕ್ಕೂ ಮುನ್ನ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರದ ‘ಚೆಲುವೆ ಕೇಳೇ ಚೆಲುವೆ’ ಎಂಬ ಮೊದಲ ಮೆಲೋಡಿ ಹಾಡು ಬಿಡುಗಡೆಯಾಗಿತ್ತು. ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರ ಕೆಮಿಸ್ಟ್ರಿ ಆ ಹಾಡಿನ ಪ್ರಮುಖ ಆಕರ್ಷಣೆಯಾಗಿತ್ತು.

ಇನ್ನು ‘ಬೇಲ್’ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಭಿನ್ನ ಹಾಗೂ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ಶಿವಣ್ಣನ ಪಾತ್ರದ ಮಾಸ್ ಲುಕ್, ಸಂಭಾಷಣೆ ಮತ್ತು ಆಕ್ಷನ್ ಶೈಲಿ ಗಮನ ಸೆಳೆದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮಲಯಾಳಂ ನಟ ಜಯರಾಮ್, ಸಾಯಿಕುಮಾರ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ, ವೈದಿ ಅವರ ಛಾಯಾಗ್ರಹಣ ಹಾಗೂ ಶಶಾಂಕ್ ನಾರಾಯಣ್ ಅವರ ಸಂಕಲನ ಚಿತ್ರಕ್ಕಿದೆ.

‘ಬೇಲ್’ ಚಿತ್ರವು 2026ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪ್ರಯುಕ್ತ ಚಿತ್ರಮಂದಿರಗಳಿಗೆ ಬರಲಿದೆ. ಹೀಗಾಗಿ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ಟೀಸರ್, ಮೆಲೋಡಿ ಹಾಡು ಹಾಗೂ ಇದೀಗ ‘ಕುಮಾರಿ’ ಹಾಡಿನ ಮೂಲಕ ಚಿತ್ರತಂಡ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಿದೆ.

ಶಿವಣ್ಣನ ಖಡಕ್ ಪೊಲೀಸ್ ಅವತಾರಕ್ಕೆ ಪೂರಕವಾಗಿ ಆ್ಯಕ್ಷನ್ ಅಂಶಗಳ ಜೊತೆಗೆ ಹಾಡುಗಳ ಮೂಲಕವೂ ವಿಭಿನ್ನ ಅನುಭವ ನೀಡಲು ಚಿತ್ರತಂಡ ಮುಂದಾಗಿದ್ದು, ಅಕ್ಟೋಬರ್ 2ರಂದು ‘ಬೇಲ್’ ಪ್ರೇಕ್ಷಕರ ನಿರೀಕ್ಷೆಯನ್ನು ಹೇಗೆ ತಲುಪಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.