ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಹಾಗೂ ಹೊಸ ಮಾದರಿಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ‘ಲಾರ್ಡ್ ಗಾಗ’. ‘ಪರಿಶುದ್ಧವಾದ ಅಹಂಕಾರ ಲಭ್ಯ’ (Lord Gaaga – Purest form of ego available) ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ.
‘ಹೆಡ್ ಬುಷ್’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶೂನ್ಯ, ಈ ಚಿತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 2022ರಲ್ಲಿ ತೆರೆಕಂಡು ಪ್ರಶಂಸೆ ಗಳಿಸಿದ್ದ ‘ಗಿಲ್ಕಿ’ ಚಿತ್ರದ ನಿರ್ದೇಶಕ ವೈ.ಕೆ (YK) ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಝೀರೋ ಗ್ರಾವಿಟಿ ಫಿಲಂ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ‘ಮುಕಿ’ ಈ ವಿಶಿಷ್ಟ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರತಂಡ ಬಿಡುಗಡೆ ಮಾಡಿರುವ ಟೈಟಲ್ ಪ್ರೋಮೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾವನ್ನೇ ಉಸಿರಾಗಿಸಿಕೊಂಡ ನಾಯಕ, ಕಥೆಯ ಬಕೆಟ್ ಹೊತ್ತು ಬಂದ ನಿರ್ದೇಶಕ ಹಾಗೂ ಕಿರುಚಿತ್ರ ನಿರ್ಮಿಸಿ ಗ್ಲೂಕೋಸ್ ಹಾಕಿಸಿಕೊಂಡ ನಿರ್ಮಾಪಕನ ಪಾತ್ರಗಳ ಸನ್ನಿವೇಶಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ರಕ್ಷಿತ್ ಶೆಟ್ಟಿ, ಪವನ್ ಕುಮಾರ್, ಉಪೇಂದ್ರ, ಕಾಶಿನಾಥ್ ಮತ್ತು ರಿಷಬ್ ಶೆಟ್ಟಿ ಸಿನಿಮಾ ಚರ್ಚೆಗಳ ಉಲ್ಲೇಖವು ಶೀರ್ಷಿಕೆ ಅನಾವರಣಕ್ಕೆ ವಿಶೇಷ ಮೆರುಗು ನೀಡಿದೆ.
ಒಟ್ಟಾರೆಯಾಗಿ.. ಈ ‘ಲಾರ್ಡ್ ಗಾಗ’ ಚಿತ್ರದ ಶೀರ್ಷಿಕೆ ಪೋಸ್ಟರ್‌ನಲ್ಲಿ ತಲೆ, ಮೆದುಳು, ಗಂಡು ಹಾಗೂ ಹೆಣ್ಣಿನ ಚಪ್ಪಲಿಗಳ ವಿಭಿನ್ನ ಸಂಕೇತಗಳನ್ನು ಬಳಸಲಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳ ಶೈಲಿಯನ್ನು ನೆನಪಿಸುವ ಈ ಪೋಸ್ಟರ್, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಕಥೆಯ ಬಗ್ಗೆ ಹಲವು ಊಹೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.






















