ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 13’ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದೆ. ಈ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮನೆಯಲ್ಲಿ ನಡೆದ ತಂತ್ರ-ಪ್ರತಿತಂತ್ರಗಳು, ಆಟದ ನಿಯಮಗಳ ಉಲ್ಲಂಘನೆ ಹಾಗೂ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿಯನ್ನು ನಿರೂಪಕ ಕಿಚ್ಚ ಸುದೀಪ್ ತಮ್ಮ ಮೊದಲ ಪಂಚಾಯಿತಿಯಲ್ಲಿ ನೇರವಾಗಿಯೇ ಪ್ರಶ್ನಿಸುತ್ತಾರಾ ಎಂಬುದಕ್ಕೆ ತೆರೆಬೀಳಲಿದೆ.
ಹಾಗೇ ಈ ವಾರದ ಪ್ರಮುಖ ಆಕರ್ಷಣೆಯೆಂದರೆ ವಿಐಪಿ ಸ್ಥಾನದಲ್ಲಿದ್ದ ಗಗನ್ ಚಿನ್ನಪ್ಪ ಮತ್ತು ತಾಂಡವ್ ನಡವಳಿಕೆ. ಆಟದಲ್ಲಿ ಪ್ರಯಾಣಿಕ ಸ್ಪರ್ಧಿಗಳಿಗೆ ಅನ್ಯಾಯ ಎಸಗಿದ್ರಾ ಮತ್ತು ತಮ್ಮ ಜವಾಬ್ದಾರಿಯಿಂದ ದಾರಿ ತಪ್ಪಿದ್ರಾ ಎಂಬ ವಿಷಯವಾಗಿ ಗಗನ್‌ಗೆ ಸುದೀಪ್ ಕ್ಲಾಸ್ ತಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ.. ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ನಾಮಿನೇಷನ್ ಪ್ರಕ್ರಿಯೆ ಕುರಿತು ಬಹಿರಂಗವಾಗಿ ಚರ್ಚಿಸಿ, ಮನೆಯ ಮೂಲ ನಿಯಮಗಳನ್ನು ಗಾಳಿಗೆ ತೂರಿದ್ದನ್ನು ಸಾಕ್ಷಿ ಸಮೇತ ಪ್ರಶ್ನಿಸಲಾಗುತ್ತದೆ.
ಮತ್ತೊಂದಡೆ ಮನೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಕಾಮನ್ ಮ್ಯಾನ್ ಸ್ಪರ್ಧಿಗಳ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿದೆ. ಪ್ರತಿಯೊಂದು ವಿಚಾರದಲ್ಲೂ ಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಮತ್ತು ಸ್ಪರ್ಧಿಗಳ ಮೇಲೆ ಸವಾರಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಡ್ರನ್ ಮಹಾಕವಿ ಮಂಜುನಾಥ್ ಹಾಗೂ ಧನುಷ್ ಮಂಜುನಾಥ್ ಧ್ವನಿ ಎತ್ತಿದ್ದಾರೆ. ಈ ಭೇದಭಾವ ಮತ್ತು ಗೊಂದಲಗಳಿಂದಾಗಿ ಮನೆಯ ವಾತಾವರಣ ಬಿಗಿಗೊಂಡಿದ್ದು, ಹಲವು ಸ್ಪರ್ಧಿಗಳು ಆಕ್ರೋಶ ಹಾಗೂ ಬೇಸರದಿಂದ ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆಯಾಗಿ.. ತಮಗೆ ಅನುಕೂಲವಾಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡಿಕೊಂಡ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ತಮ್ಮ ಮೊದಲ ಪಂಚಾಯಿತಿಯಲ್ಲಿ ಈ ವಾರ ತಕ್ಕ ಪಾಠ ಕಲಿಸಲಿದ್ದು, ಈ ಎಲ್ಲ ಗೊಂದಲಗಳಿಗೆ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ತೆರೆ ಬೀಳಲಿದೆ.






















