SK Home Ad
Home ಕ್ರೀಡೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೈಸೂರಿನ ಶಿಲ್ಪಾಗೆ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೈಸೂರಿನ ಶಿಲ್ಪಾಗೆ ಕಂಚಿನ ಪದಕ

0
54

ಮೈಸೂರು: ಕಾಮನ್‌ವೆಲ್ತ್ ಗೇಮ್ಸ್‌ 2026ರಲ್ಲಿ ಭಾರತದ ಪ್ಯಾರಾ ಅಥ್ಲೆಟಿಕ್ಸ್ ತಂಡಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ದೊರೆತಿದ್ದು, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ನಿವಾಸಿ ಕೆ.ಎಸ್. ಶಿಲ್ಪಾ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಬಾಲ್ಯದಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರೂ ಛಲ ಬಿಡದ ಶಿಲ್ಪಾ, ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಬಳಿಕ ಮಾತನಾಡಿದ ಶಿಲ್ಪಾ, “ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನ ಕುಟುಂಬದ ಬೆಂಬಲ, ತರಬೇತುದಾರರ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸವೇ ಈ ಯಶಸ್ಸಿನ ಹಿಂದಿದೆ. ಅಪಘಾತದ ನಂತರ ಜೀವನ ಮುಗಿದಂತಾಗಿತ್ತು. ಆದರೆ ಇಂದು ದೇಶಕ್ಕಾಗಿ ಪದಕ ಗೆದ್ದಿರುವುದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ” ಎಂದು ಭಾವುಕರಾಗಿ ಹೇಳಿದರು.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ರೈತ ಕುಟುಂಬದಲ್ಲಿ ಜನಿಸಿದ ಶಿಲ್ಪಾ, ಬಾಲ್ಯದಲ್ಲೇ ನಡೆದ ಅಪಘಾತದಲ್ಲಿ ಎಡ ಕಾಲನ್ನು ಕಳೆದುಕೊಂಡರು. ನಂತರ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅವರು, ಬಳಿಕ ತರಬೇತುದಾರರ ಸಲಹೆಯಂತೆ ಶಾಟ್‌ಪುಟ್ ಹಾಗೂ ಡಿಸ್ಕಸ್ ಎಸೆತ ಸ್ಪರ್ಧೆಗಳತ್ತ ಗಮನ ಹರಿಸಿದರು. ಉತ್ತಮ ತರಬೇತಿಗಾಗಿ ಬೆಂಗಳೂರಿಗೆ ತೆರಳಿ ಕಠಿಣ ಅಭ್ಯಾಸ ನಡೆಸಿದರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಶಿಲ್ಪಾ, ಗೋವಾ ರಾಷ್ಟ್ರೀಯ ಕ್ರೀಡಾಕೂಟ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಗಳ ಆಧಾರದ ಮೇಲೆ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಅವರು, ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಶಿಲ್ಪಾ ಅವರ ಸಾಧನೆಗೆ ರಾಜಕೀಯ ನಾಯಕರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕಠಿಣ ಪರಿಸ್ಥಿತಿಗಳನ್ನು ಮೀರಿ ವಿಶ್ವ ವೇದಿಕೆಯಲ್ಲಿ ಪದಕ ಗೆದ್ದಿರುವ ಶಿಲ್ಪಾ ಅವರ ಜೀವನ ಪಯಣ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಮಾದರಿಯಾಗಿದೆ.