ಕರ್ನಾಟಕದ ಅರಣ್ಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಬಳಿ ಇರುವ ಅಕ್ರಮ ಅಥವಾ ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ 1 ರೊಳಗೆ ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸ್ವಯಂಪ್ರೇರಿತ ಸಲ್ಲಿಕೆಗೆ ಅವಕಾಶ: ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಆತ್ಮರಕ್ಷಣೆಗಾಗಿ ಅಕ್ರಮ ಬಂದೂಕುಗಳನ್ನು ಇಟ್ಟುಕೊಂಡಿದ್ದರೆ, ನವೆಂಬರ್ 1 ರೊಳಗೆ ಸ್ವಯಂಪ್ರೇರಿತವಾಗಿ ಒಪ್ಪಿಸಲು ಅವಕಾಶ ನೀಡಲಾಗಿದೆ. ಹೀಗೆ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ.
ಹೊಸ ಲೈಸೆನ್ಸ್‌ಗೆ ಅವಕಾಶ: ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ ಬಳಿಕ, ನಿಜವಾದ ರಕ್ಷಣೆಯ ಅಗತ್ಯವಿರುವವರು ಹೊಸದಾಗಿ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಗಡುವು ಮೀರಿದರೆ ಕಠಿಣ ಕ್ರಮ: ನವೆಂಬರ್ 1ರ ಗಡುವಿನ ನಂತರ ಯಾರಾದರೂ ಅಕ್ರಮ ಬಂದೂಕುಗಳನ್ನು ಹೊಂದಿದ್ದರೆ, ಅವರ ವಿರುದ್ಧ ಅತ್ಯಂತ ಗಂಭೀರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದ
ಬಂದೂಕುಗಳಿಂದಲೇ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಡಿಕೆಶಿ ಕಳವಳ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳಿಗೆ ಸಲಹೆ: “ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಜನರ ಮೇಲೆ ಒತ್ತಡ ಹೇರಬೇಡಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು, ಕೆಲವೊಂದು ವಿನಾಯಿತಿಗಳನ್ನು ನೀಡಬೇಕು” ಎಂದು ಡಿಕೆಶಿ ಅರಣ್ಯ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಭತ್ಯೆ ಹೆಚ್ಚಳ ಮತ್ತು ಕಸ್ತೂರಿ ರಂಗನ್ ವರದಿ: ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ಭತ್ಯೆ ಹೆಚ್ಚಳದ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಕಸ್ತೂರಿ ರಂಗನ್ ವರದಿಯಲ್ಲಿ ಕರ್ನಾಟಕಕ್ಕೊಂದು, ಕೇರಳಕ್ಕೊಂದು ನ್ಯಾಯ ನೀಡಲಾಗಿದೆ. ಇದರ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ, ‘ತೇಗದ ಸಿರಿ’ ಯೋಜನೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.





















