ಗೋಕರ್ಣ: ಐತಿಹಾಸಿಕ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಮಳೆಗಾಲದಲ್ಲಿ ಹೊಲಸು ನೀರು ನುಗ್ಗುತ್ತಿರುವ ಹಾಗೂ ಸಂಗಮ ನಾಲೆಯ ಅವ್ಯವಸ್ಥೆಯ ಕುರಿತು ಜೂನ್ 10 ರಂದು ʻಸಂಯುಕ್ತ ಕರ್ನಾಟಕʼ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸಣ್ಣ ನೀರಾವರಿ ಇಲಾಖೆ ತಕ್ಷಣವೇ ಸ್ಪಂದಿಸಿದೆ.
ಇಲಾಖೆಯ ಕಾರವಾರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ಅಧಿಕೃತ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.
ಪತ್ರಿಕಾ ವರದಿ ಹಾಗೂ ಇತ್ತೀಚೆಗೆ ಈ ಕುರಿತು ಸಿಎಂ ಅವರಿಗೆ ಸಲ್ಲಿಕೆಯಾಗಿದ್ದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಜುಲೈ 14 ರಂದು ಗೋಕರ್ಣದ ಸಂಗಮ ನಾಲೆಗೆ ಖುದ್ದಾಗಿ ಭೇಟಿ ನೀಡಿದ್ದರು.
ಶಾಶ್ವತ ಪರಿಹಾರಕ್ಕೆ ಶಿಫಾರಸು: ಸಂಗಮ ನಾಲೆಯ ಎರಡೂ ಬದಿಯಲ್ಲಿ ಪ್ರತ್ಯೇಕವಾದ ತ್ಯಾಜ್ಯ ನೀರಿನ ಕಾಲುವೆ ನಿರ್ಮಿಸಿ, ಸಮುದ್ರ ಸೇರುವಲ್ಲಿ ಸಂಸ್ಕರಣಾ ಘಟಕದ ಮೂಲಕ ನೀರನ್ನು ಶುದ್ಧೀಕರಿಸಿ ಬಿಡಬೇಕಾಗಿದೆ. ಜೊತೆಗೆ, ಪ್ರತಿವರ್ಷ ದೇವಸ್ಥಾನದ ಹಿಂಬದಿಯ ಕಾಲುವೆಯ ಹೂಳನ್ನು ಶಾಶ್ವತವಾಗಿ ತೆಗೆಯುವ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವ ಮೂಲಕ ದೇವಸ್ಥಾನಕ್ಕೆ ನೀರು ನುಗ್ಗುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಇಲಾಖೆಯು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.





















