ಚಿತ್ರದುರ್ಗ: ಜಮೀನು ವಿವಾದದ ಹಿನ್ನೆಲೆಯಲ್ಲಿ ಪುತ್ರನೇ ಹೆತ್ತ ತಂದೆಯನ್ನು ಹತ್ಯೆ ಮಾಡಿರುವ ಕೃತ್ಯ ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗ್ರಾಮದ ಬಳಿ ಭಾನುವಾರ ನಡೆದಿದೆ.
ಕಲ್ಕುಂಟೆ ಗ್ರಾಮದ ನಿವಾಸಿ ಚಂದ್ರಣ್ಣ (65) ಕೊಲೆಯಾದವರು. ಪುತ್ರ ಪ್ರಸನ್ನ ಕೊಲೆ ಆರೋಪಿ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯಂತೆ, ಕೆಲ ವರ್ಷಗಳ ಹಿಂದೆ ಪ್ರಸನ್ನ ಪೋಷಕರ ವಿರೋಧವನ್ನು ಲೆಕ್ಕಿಸದೆ ಪ್ರೇಮ ವಿವಾಹವಾಗಿದ್ದು, ಬಳಿಕ ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇತ್ತೀಚೆಗೆ ತಂದೆ ಚಂದ್ರಣ್ಣ ಅವರ ಹೆಸರಿನಲ್ಲಿದ್ದ ಐದು ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
“ನಮ್ಮ ನಿಧನದ ನಂತರ ಜಮೀನು ನಿನಗೇ ಸೇರುತ್ತದೆ” ಎಂದು ತಂದೆ ಸಮಾಧಾನಪಡಿಸಿದ್ದರೂ ತನ್ನ ಚಿಕ್ಕಪ್ಪ ಅಜ್ಜಪ್ಪನ ಕುಮ್ಮುಕ್ಕು ಪರಿಣಾಮ ಪ್ರಸನ್ನ ನಿರಂತರವಾಗಿ ಗಲಾಟೆ ಮಾಡುತ್ತಿದ್ದನೆಂದು ಚಂದ್ರಣ್ಣನ ಪತ್ನಿ ದೂರಿದ್ದಾರೆ.
ಚಂದ್ರಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ.
ಘಟನೆಯ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಗೆ ನಿಖರ ಕಾರಣ ಮತ್ತು ಕುಟುಂಬಸ್ಥರು ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






















