SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮತಪಟ್ಟಿ ಪರಿಷ್ಕರಣೆ ಜಾಗೃತಿ:ಟಾಗೋರ್ ಬೀಚ್‌ನಲ್ಲಿ ಮಾನವ ಸರಪಳಿ

ಮತಪಟ್ಟಿ ಪರಿಷ್ಕರಣೆ ಜಾಗೃತಿ:ಟಾಗೋರ್ ಬೀಚ್‌ನಲ್ಲಿ ಮಾನವ ಸರಪಳಿ

0
70

ದಾಂಡೇಲಿ ( ಉತ್ತರಕನ್ನಡ) : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ SVEEP ಸಮಿತಿಯ ಆಶ್ರಯದಲ್ಲಿ ಶನಿವಾರ ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‌ನಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಮಾನವ ಸರಪಳಿಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವ, ಪ್ರತಿಯೊಬ್ಬ ಅರ್ಹ ನಾಗರಿಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯ ಹಾಗೂ ತಪ್ಪು ಮಾಹಿತಿಯನ್ನು ಸರಿಪಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ಟಾಗೋರ್ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನವೂ ಹಮ್ಮಿಕೊಳ್ಳಲಾಗಿದ್ದು, ಪರಿಸರ ಸಂರಕ್ಷಣೆ ಮತ್ತು ನಾಗರಿಕ ಜವಾಬ್ದಾರಿಯ ಸಂದೇಶವನ್ನು ಸಾರಲಾಯಿತು.

ಇದನ್ನೂ ಓದಿ: ರೈತರು ಕಡಿಮೆ ನೀರಿನ ಬೆಳೆಗಳತ್ತ ಮುಖ ಮಾಡಲಿ: ಸುಷ್ಮಾ ಗೋಡಬೋಲೆ

ಜಿಲ್ಲೆಯಲ್ಲಿ ಪರಿಷ್ಕರಣೆ ಕಾರ್ಯ ವೇಗ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಚುರುಕಿನಿಂದ ಸಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲೆಯಲ್ಲಿ ಈಗಾಗಲೇ 7,68,545 ನೈಜ ಮತದಾರರ ಗುರುತಿನ ಎನ್ಯುಮರೇಷನ್ ಫಾರ್ಮ್‌ಗಳ ಗಣಕೀಕರಣ ಪೂರ್ಣಗೊಂಡಿದ್ದು, ನಿಗದಿತ ವೇಳೆಗೆ ಮುನ್ನವೇ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

12.30 ಲಕ್ಷ ಮತದಾರರಿಗೆ ಫಾರ್ಮ್ ವಿತರಣೆ : ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರು ನೋಂದಾಯಿತರಾಗಿದ್ದು, ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ನಡೆಸುತ್ತಿದ್ದು, ಮತದಾರರ ಪಟ್ಟಿಯನ್ನು ನಿಖರಗೊಳಿಸುವ ನಿಟ್ಟಿನಲ್ಲಿ ಹಲವು ಪರಿಶೀಲನೆಗಳು ನಡೆಯುತ್ತಿವೆ.

ಇದನ್ನೂ ಓದಿ: ವಾಂಗ್ಚುಕ್ ಬಳಿಕ ಅಭಿಜೀತ್ ದೀಪ್ಕೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ

14,575 ಪ್ರಕರಣಗಳ ಗುರುತು : ಮನೆ-ಮನೆ ಸಮೀಕ್ಷೆಯ ವೇಳೆ ಒಟ್ಟು 14,575 ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 2,994 ಶಾಶ್ವತವಾಗಿ ಬೇರೆಡೆಗೆ ವಲಸೆ ಹೋದವರು, 10,264 ಮರಣ ಹೊಂದಿದ ಮತದಾರರು, 1,189 ದ್ವಿಪ್ರತಿ (ಡುಪ್ಲಿಕೇಟ್) ಮತದಾರರ ದಾಖಲೆಗಳು ಸೇರಿವೆ. ಈ ಮಾಹಿತಿಯನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರಗೊಳಿಸುವ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಖರ ಮತದಾರರ ಪಟ್ಟಿಗೆ ಒತ್ತು: ಮತದಾರರ ಪಟ್ಟಿ ಪರಿಷ್ಕರಣೆಯ ಉದ್ದೇಶ, ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರಿರುವುದನ್ನು ಖಚಿತಪಡಿಸುವುದು ಹಾಗೂ ಮರಣ, ಸ್ಥಳಾಂತರ ಅಥವಾ ದ್ವಿಪ್ರತಿ ದಾಖಲೆಗಳನ್ನು ತೆಗೆದುಹಾಕುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸುವುದಾಗಿದೆ.

ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಜಿಲ್ಲಾಡಳಿತವು ಸಾರ್ವಜನಿಕರು ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದೆ.