ಬೆಂಗಳೂರು: ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಸರ್ಕಾರದ ಮೊದಲ ಅವಧಿಯಲ್ಲಿ ಎರಡೂವರೆ ವರ್ಷ ಪೂರೈಸಿದ ಎಲ್ಲಾ ನಿಗಮ-ಮಂಡಳಿಗಳು, ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರ ಸ್ವಯಂ ಪದತ್ಯಾಗಕ್ಕೆ ಪಕ್ಷಾಧ್ಯಕ್ಷರು ಹಾಗೂ ಮುಖ್ಯ ಮಂತ್ರಿಯಿಂದ ಮೌಖಿಕವಾಗಿ ತಾಕೀತು ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಳಬರ ಜಾಗಕ್ಕೆ ಹೊಸಬರು: ಸರ್ಕಾರದ ವಿವಿಧ 132ಕ್ಕೂ ಅಧಿಕ ನಿಗಮ ಮಂಡಳಿಗಳಿಗೆ ಮೂರು ಹಂತದಲ್ಲಿ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಆಗಿತ್ತು. ಪ್ರಸ್ತುತ ಹಲವು ನಿಗಮ-ಮಂಡಳಿಗಳ ಅಧ್ಯಕ್ಷರ ಅವಧಿ ಮುಗಿದಿದೆ. ಇನ್ನೂ ಕೆಲವರದ್ದು ಸೆಪ್ಟೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಕಳೆದ ಫೆಬ್ರವರಿಯಲ್ಲಿ 53 ನಿಗಮ ಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೆ ಇದೀಗ ಎಲ್ಲರನ್ನೂ ಬದಲಿಸಲು ಹೊಸ ಸಿಎಂ ಹಾಗೂ ಕೆಪಿಸಿಸಿ ನೂತನ ಅಧ್ಯಕ್ಷರು ಮುಂದಾಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಹರಿಪ್ರಸಾದ್ ಬಹಿರಂಗವಾಗಿಯೇ ಹುದ್ದೆ ಬಿಡಿ ಎಂದು ಸಂದೇಶ ರವಾನಿಸಿದ್ದರು.
2ನೇ ಹಂತದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. 20 ಸ್ಥಾನಗಳಿಗೆ 45 ಜನ ಆಕಾಂಕ್ಷಿಗಳಾಗಿದ್ದಾರೆ. ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ಮಂತ್ರಿಸ್ಥಾನ ನೀಡಲು ಹೈಕಮಾಂಡ್ ಚಿಂತಿಸಿರುವ ಹಿನ್ನೆಲೆಯಲ್ಲಿ ಯರ‍್ಯಾರಿಗೆ ಅದೃಷ್ಟ ಖುಲಾಯಿಸಲಿದೆ ಅನ್ನೋದು ನಿಗೂಢವಾಗಿದೆ. ಹಾಗಾಗಿ ಸಚಿವಸ್ಥಾನ ವಂಚಿತ ಹಿರಿಯ ಶಾಸಕರನ್ನು ಬಿಡಿಎ, ಕೆಹೆಚ್‌ಬಿ ಸೇರಿದಂತೆ ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಪಕ್ಷ ಸಂಘಟನೆಯಲ್ಲಿ ದುಡಿದಿರುವ ಪ್ರಮುಖ ನಾಯಕರಿಗೂ ಅವಕಾಶ ಮಾಡಿಕೊಡಬೇಕಾಗಿದ್ದು ಈಗಾಗಲೇ ಪ್ರಾಥಮಿಕ ಹಂತದ ಪ್ರಕ್ರಿಯೆ ಮುಗಿದಿದೆ ಎನ್ನಲಾಗಿದೆ.
ಭವಿಷ್ಯದ ಚುನಾವಣೆ ಗಣನೆ: ಪ್ರಸ್ತುರ ಹೊಸ ರಾಜಕೀಯ ಸಮೀಕರಣದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರುಗಳ ಆಯ್ಕೆಗೆ ವೇದಿಕೆ ಸಿದ್ಧವಾಗುತ್ತಿದೆ. ಮುಂಬರುವ ಜಿಬಿಎ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಕ್ರಿಯ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.
ವಾರದೊಳಗೆ ಆದೇಶ ಸಾಧ್ಯತೆ: ಸರ್ಕಾರದಿಂದ ಹುದ್ದೆ ತೆರವಿದೆ ಇನ್ನೂ ಅಧಿಕೃತ ಆದೇಶ ಹೊರಬೀಳದಿದ್ದರೂ, ಸಂಬಂಧಿತರಿಗೆ ಮೌಖಿಕ ಸಂದೇಶ ರವಾನೆಯಾಗಿರುವುದರಿಂದ ಯಾವುದೇ ಕ್ಷಣದಲ್ಲಿ ರಾಜೀನಾಮೆ ಪ್ರಕ್ರಿಯೆ ಆರಂಭವಾಗಲಿದೆ. ಮೂಲಗಳ ಮಾಹಿತಿಯಂತೆ ಸಂಪುಟ ವಿಸ್ತರಣೆ ಜೊತೆಜೊತೆಗೆ ನಿಗಮ,ಮಂಡಳಿಗೂ ಹೊಸ ಅಧ್ಯಕ್ಷರನ್ನು ಕಾಣಲಿದ್ದು ಇನ್ನೊಂದು ವಾರದೊಳಗೆ ಹೊಸ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಲಾಗಿದೆ.
ಆಕಾಂಕ್ಷಿಗಳ ಲಾಬಿ ಆರಂಭ: ನಿಗಮ-ಮಂಡಳಿಗಳಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್‌ನ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಸಚಿವರು, ಹಿರಿಯ ನಾಯಕರು ಹಾಗೂ ಪಕ್ಷ ಪ್ರಮುಖರನ್ನು ಭೇಟಿ ಮಾಡಿ ತಮ್ಮ ಹೆಸರನ್ನು ಪರಿಗಣಿಸುವಂತೆ ದುಂಬಾಲು ಬಿದ್ದಿದ್ದಾರೆ. ಜಿಲ್ಲಾವಾರು, ಜಾತಿ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ ಹಾಗೂ ಪಕ್ಷದ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಹೊಸ ನೇಮಕಾತಿ ನಡೆಯುವ ಸಾಧ್ಯತೆ ಇದೆ.
ಅಕಾಡೆಮಿಗಳ ಅಧ್ಯಕ್ಷರು ಸೇಫ್: ಅಕಾಡೆಮಿಗಳಿಗೆ ಇಂಥ ಯಾವುದೇ ಸೂಚನೆ ಬಂದಿಲ್ಲ ಎನ್ನಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಸೂಚಿಸಿದರೆ ನಾವು ಸ್ಥಾನ ತ್ಯಜಿಸಲು ಸಿದ್ಧ ಎಂದು ಕೆಲವು ಅಕಾಡಮಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ.





















