SK Home Ad
Home ನಮ್ಮ ಜಿಲ್ಲೆ ಮಂಡ್ಯ ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ಹಸುಗಳ ರಕ್ಷಣೆ: 6 ಜನ ವಶಕ್ಕೆ

ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ಹಸುಗಳ ರಕ್ಷಣೆ: 6 ಜನ ವಶಕ್ಕೆ

0
85

ಮದ್ದೂರು: ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ 12 ಹಸುಗಳನ್ನು ವಶಕ್ಕೆ ಪಡೆದು ಸಮೀಪದ ಗೋಶಾಲೆಗೆ ಸ್ಥಳಾಂತರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ ಸುಮಾರು 11.15ರ ಸುಮಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಂಡ್ಯ ಕಡೆಯಿಂದ ಮದ್ದೂರು ಕಡೆಗೆ ಮೂರು ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ತಪಾಸಣೆ ನಡೆಸಿದರು.

ಪರಿಶೀಲನೆ ವೇಳೆ ಜಾನುವಾರುಗಳನ್ನು ಕುಳ್ಳಿಕೊಪ್ಪಲು ಗ್ರಾಮದ ಅನಂತ್ ಎಂಬುವವರು ರಾಮನಗರದ ಕಸಾಯಿಖಾನೆಗೆ ಕೊಂಡೊಯ್ಯಲು ಸೂಚಿಸಿದ್ದರಿಂದ ಸಾಗಿಸುತ್ತಿದ್ದೇವೆ ಎಂದು ವಾಹನದಲ್ಲಿದ್ದವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಜಾನುವಾರು ಸಾಗಣೆಗೆ ಸಂಬಂಧಿಸಿದ ಪರವಾನಗಿ ಹಾಗೂ ಅಗತ್ಯ ದಾಖಲೆಗಳನ್ನು ಕೇಳಿದಾಗ ಸೂಕ್ತ ದಾಖಲೆಗಳನ್ನು ಹಾಜರುಪಡಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಜಾನುವಾರುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ (KA-20-AA-7500), ಟಾಟಾ ಏಸ್ (KA-45-A-4280) ಹಾಗೂ ಟಾಟಾ ಇಂಟ್ರಾ (KA-45-A-6373) ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ಬಳಿಕ 12 ಹಸುಗಳನ್ನು ವಶಕ್ಕೆ ಪಡೆದು ಸಮೀಪದ ಗೋಶಾಲೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿದರು.

ಜಾನುವಾರು ಸಾಗಣೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಹಸುಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗುವುದು. ದಾಖಲೆಗಳಲ್ಲಿ ಲೋಪ ಕಂಡುಬಂದರೆ ಅಥವಾ ಕಾನೂನು ಉಲ್ಲಂಘನೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಕೆ.ಎಸ್., ದರ್ಶನ್ ಕೆ.ಎಂ., ಪ್ರಜ್ವಲ್, ಸುಮಂತ್ ಕೆ.ಎಸ್., ದೇವರಾಜ್ ಹಾಗೂ ಅನಂತು ಎಂಬ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ವೇಳೆ ಹಿಂದೂಪರ ಸಂಘಟನೆಯ ವೀರಭದ್ರ, ಗುರು ಮಲ್ಲೇಶ್, ಗಿರೀಶ್, ಅನಿಲ್ ಕುಮಾರ್, ತೇಜಸ್, ದಿನೇಶ್ ಹಾಗೂ ಬಾಬು ಅವರು ಪೊಲೀಸರಿಗೆ ಮಾಹಿತಿ ನೀಡಿ ಸಹಕಾರ ನೀಡಿದರು.