ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ (85) ಅವರು ಶನಿವಾರ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಚನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ವಲಯದಲ್ಲಿ ಸಂತಾಪದ ಅಲೆ ವ್ಯಕ್ತವಾಗಿದೆ. ಕುಟುಂಬದ ಸದಸ್ಯರು, ಜೆಡಿಎಸ್ ನಾಯಕರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಭಾರತದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ
ಕೆಲ ವರ್ಷಗಳಿಂದ ಉಸಿರಾಟದ ಸಮಸ್ಯೆ : ಕಳೆದ ಎರಡು-ಮೂರು ವರ್ಷಗಳಿಂದ ಚನ್ನಮ್ಮ ಅವರು ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯದಲ್ಲಿ ತೀವ್ರ ಹಿನ್ನಡೆ ಕಂಡುಬಂದ ಕಾರಣ ಜುಲೈ 15ರಂದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ. ಸತ್ಯನಾರಾಯಣ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬು : ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಚನ್ನಮ್ಮ ಅವರು 1954ರ ಮೇ 25ರಂದು ಎಚ್.ಡಿ. ದೇವೇಗೌಡ ಅವರನ್ನು ವಿವಾಹವಾಗಿದ್ದರು. ಸರಳ ಕುಟುಂಬ ಜೀವನ ನಡೆಸಿದ ಅವರು ದೇವೇಗೌಡರ ದೀರ್ಘ ರಾಜಕೀಯ ಪಯಣದಲ್ಲಿ ಸದಾ ಬೆನ್ನೆಲುಬಾಗಿ ನಿಂತಿದ್ದರು.
ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು
ದೇವೇಗೌಡರು ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಚನ್ನಮ್ಮ ಸಮರ್ಥವಾಗಿ ನಿಭಾಯಿಸಿದ್ದರು. ಮನೆ, ಕೃಷಿ ಹಾಗೂ ಮಕ್ಕಳ ಶಿಕ್ಷಣದ ಕಡೆ ವಿಶೇಷ ಗಮನಹರಿಸಿ ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.
ಆರು ಮಕ್ಕಳ ತಾಯಿ : ಚನ್ನಮ್ಮ ಹಾಗೂ ದೇವೇಗೌಡ ದಂಪತಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಎಚ್.ಡಿ. ರೇವಣ್ಣ, ಎಚ್.ಡಿ. ಬಾಲಕೃಷ್ಣ, ಎಚ್.ಡಿ. ರಮೇಶ್ ಗೌಡ, ಎಚ್.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಕುಟುಂಬದ ಹಿರಿಯರಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದ ಚನ್ನಮ್ಮ ಅವರು ಕುಟುಂಬದ ಒಗ್ಗಟ್ಟಿನ ಪ್ರತೀಕವಾಗಿದ್ದರು.
ಇದನ್ನೂ ಓದಿ: ವಾಂಗ್ಚುಕ್ ಬಳಿಕ ಅಭಿಜೀತ್ ದೀಪ್ಕೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ
ಆ್ಯಸಿಡ್ ದಾಳಿಯಿಂದ ಪಾರಾಗಿದ್ದರು : 2001ರ ಫೆಬ್ರವರಿಯಲ್ಲಿ ಹರದನಹಳ್ಳಿಯ ದೇವಾಲಯದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಚನ್ನಮ್ಮ ಅವರ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸೂಕ್ತ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದರು. ಈ ಘಟನೆ ರಾಜ್ಯದಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.
ಸರಳತೆ ಮತ್ತು ತ್ಯಾಗದ ಬದುಕು : ಅಂದಿನ ಕಾಲದಲ್ಲೇ ಎಸ್ಎಸ್ಎಲ್ಸಿ ಶಿಕ್ಷಣ ಪೂರ್ಣಗೊಳಿಸಿದ್ದ ಚನ್ನಮ್ಮ ಅವರು ತಮ್ಮ ಕುಟುಂಬದಲ್ಲಿ ಹಿರಿಯ ಮಗಳಾಗಿದ್ದು, ತಮ್ಮ ಸಹೋದರ-ಸಹೋದರಿಯರ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಬಳಿಕ ದೇವೇಗೌಡರ ಜೀವನ ಸಂಗಾತಿಯಾಗಿ ಅವರ ರಾಜಕೀಯ ಪಯಣದ ಪ್ರತಿಯೊಂದು ಹಂತದಲ್ಲೂ ಮೌನ ಬೆಂಬಲ ನೀಡಿದರು.
ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದರೂ, ಕುಟುಂಬದ ಮೌಲ್ಯಗಳು, ಸರಳತೆ ಹಾಗೂ ಸೇವಾ ಮನೋಭಾವದಿಂದ ಅವರು ಅನೇಕರಿಗೆ ಮಾದರಿಯಾಗಿದ್ದರು. ಚನ್ನಮ್ಮ ಅವರ ನಿಧನದಿಂದ ದೇವೇಗೌಡ ಕುಟುಂಬಕ್ಕೆ ಮಾತ್ರವಲ್ಲ, ಕರ್ನಾಟಕ ರಾಜಕೀಯಕ್ಕೂ ಅಪಾರ ನಷ್ಟ ಉಂಟಾಗಿದೆ.






















