SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೆಳಾಂಬರದ ಕಡಲತೀರದ ಬಳಿ ಡಾಲ್ಫಿನ್ ಮೃತದೇಹ ಪತ್ತೆ

ಬೆಳಾಂಬರದ ಕಡಲತೀರದ ಬಳಿ ಡಾಲ್ಫಿನ್ ಮೃತದೇಹ ಪತ್ತೆ

0
88

ಅಂಕೋಲಾ: ತಾಲೂಕಿನ ಬೆಳಾಂಬರದ ಕಡಲತೀರದ ಬಂಡೆಯೊಂದರ ಮೇಲೆ ಸುಮಾರು 8 ಅಡಿ ಉದ್ದದ ಡಾಲ್ಫಿನ್ ಮೃತದೇಹ ಭಾನುವಾರ ಪತ್ತೆಯಾಗಿದೆ.

ಸಮುದ್ರ ತೀರದಲ್ಲಿ ಓಡಾಡುತ್ತಿದ್ದ ಸ್ಥಳೀಯ ಮೀನುಗಾರರು ಡಾಲ್ಫಿನ್ ಮೃತದೇಹ ಕಂಡು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಾಗರ ಜೀವಿ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಡಾಲ್ಫಿನ್ ದೇಹವು ಸಂಪೂರ್ಣವಾಗಿ ಕೊಳೆತು ಹೋಗಿರುವುದರಿಂದ ಇದು ಮೃತಪಟ್ಟು ಹಲವು ದಿನಗಳೇ ಕಳೆದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದು ಒಶಿಯನ್ ಹಂಪ್‌ಬ್ಯಾಕ್ ಜಾತಿಗೆ ಸೇರಿದ ಡಾಲ್ಫಿನ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಈ ಡಾಲ್ಫಿನ್ ಮೃತಪಟ್ಟಿರಬಹುದು ಅಥವಾ ತೀವ್ರ ಅನಾರೋಗ್ಯದಿಂದ ಮೃತಪಟ್ಟು ಕೊಚ್ಚಿಕೊಂಡು ಬಂದು ಇಲ್ಲಿನ ಬಂಡೆಗಳ ನಡುವೆ ಸಿಲುಕಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.