ದಾವಣಗೆರೆ: ನಗರದ ಹಳೇ ಪಿ.ಬಿ. ರಸ್ತೆಯಲ್ಲಿರುವ ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನು ವಿದ್ಯಾನಗರ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ. ಶೇಖರ್ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿಲ್ಪಾ ವೈ.ಎಸ್. ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರೊಂದಿಗೆ ಗೋದಾಮಿನಲ್ಲಿದ್ದ ಧಾನ್ಯಗಳನ್ನು ಪರಿಶೀಲಿಸಿದಾಗ ಪಡಿತರ ಅಕ್ಕಿ ಮತ್ತು ರಾಗಿ ಅಕ್ರಮವಾಗಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಪಂಚರ ಸಮಕ್ಷಮದಲ್ಲಿ ತೂಕ ಮಾಡಿಸಿದ ವೇಳೆ 680 ಕೆ.ಜಿ. ಪಡಿತರ ಅಕ್ಕಿ ಹಾಗೂ 810 ಕೆ.ಜಿ. ಪಡಿತರ ರಾಗಿ ಪತ್ತೆಯಾಗಿದ್ದು, ವಶಪಡಿಸಿಕೊಂಡ ಧಾನ್ಯಗಳ ಒಟ್ಟು ಮೌಲ್ಯ 49,320 ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಕಲಂ 3 ಮತ್ತು 7 ಹಾಗೂ ಪಿಡಿಎಸ್ ಆದೇಶದ ಕಲಂ 18ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.






















