SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ರಾಫ್ಟಿಂಗ್ ಹೊರತುಪಡಿಸಿ ಇತರೆ ಜಲಕ್ರೀಡೆಗಳಿಗೆ ಅನುಮತಿ ನೀಡಿ: ಜಿಲ್ಲಾಧಿಕಾರಿಗೆ ಮನವಿ

ರಾಫ್ಟಿಂಗ್ ಹೊರತುಪಡಿಸಿ ಇತರೆ ಜಲಕ್ರೀಡೆಗಳಿಗೆ ಅನುಮತಿ ನೀಡಿ: ಜಿಲ್ಲಾಧಿಕಾರಿಗೆ ಮನವಿ

0
104

ದಾಂಡೇಲಿ: ಸಂ. ಕ. ಸಮಾಚಾರ : ಮಳೆಗಾಲದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಕ್ರೀಡೆಗಳಿಗೆ ವಿಧಿಸಿರುವ ನಿಷೇಧವನ್ನು ದಾಂಡೇಲಿ ಭಾಗದ ವಿಶೇಷ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಮರುಪರಿಶೀಲಿಸಿ, ರಾಫ್ಟಿಂಗ್ ಹೊರತುಪಡಿಸಿ ಇತರೆ ಜಲಕ್ರೀಡೆಗಳಿಗೆ ಶರತ್ತುಬದ್ಧ ಅನುಮತಿ ನೀಡುವಂತೆ ಒತ್ತಾಯಿಸಿ ದಾಂಡೇಲಿ ರೆಸಾರ್ಟ್ ಮಾಲೀಕರ ಸಂಘವು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.

ಮನವಿಯಲ್ಲಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿರುವ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಪ್ರವಾಸೋದ್ಯಮ ಉದ್ಯಮ ಆರಂಭಿಸಲಾಗಿದೆ.

ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!

ಈ ಕ್ಷೇತ್ರವನ್ನು ಅವಲಂಬಿಸಿ ಸಾವಿರಾರು ಸ್ಥಳೀಯರಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ದೊರೆತಿದೆ. ಆದರೆ ಕಳೆದ ಎರಡು ವರ್ಷಗಳಿಂದ ಜಲಕ್ರೀಡೆಗಳಿಗೆ ವಿಧಿಸಲಾಗುತ್ತಿರುವ ಸಂಪೂರ್ಣ ನಿಷೇಧದಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ರೆಸಾರ್ಟ್, ಹೋಂಸ್ಟೇ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಲಾಗಿದೆ.

ದಾಂಡೇಲಿ ಹಾಗೂ ಜೋಯಿಡಾ ಭಾಗದ ಪ್ರವಾಸೋದ್ಯಮ ಸಂಪೂರ್ಣವಾಗಿ ಕಾಳಿ ನದಿ ಹಾಗೂ ಜಲಕ್ರೀಡೆಗಳನ್ನು ಅವಲಂಬಿಸಿದ್ದು, ಜಿಲ್ಲೆಯ ಇತರೆ ಭಾಗಗಳಂತೆ ಮಳೆಗಾಲದಲ್ಲಿ ಪರ್ಯಾಯ ಪ್ರವಾಸಿ ಆಕರ್ಷಣೆಗಳು ಇಲ್ಲ. ಆದ್ದರಿಂದ ಜಿಲ್ಲೆಯಾದ್ಯಂತ ಒಂದೇ ರೀತಿಯ ನಿಷೇಧ ಆದೇಶ ಜಾರಿಗೊಳಿಸುವ ಬದಲು ಸ್ಥಳೀಯ ಭೌಗೋಳಿಕ ಪರಿಸ್ಥಿತಿ ಮತ್ತು ಸೂಪಾ ಜಲಾಶಯದಿಂದ ನೀರು ಹೊರಬಿಡುವ ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.

ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ

ಮಳೆಗಾಲದಲ್ಲಿ ರಾಫ್ಟಿಂಗ್‌ಗೆ ನಿರ್ಬಂಧ ಮುಂದುವರಿಸಿದರೂ, ರೆಸಾರ್ಟ್‌ಗಳ ಎದುರಿನ ಕಾಳಿ ನದಿಯ ಕಡವಿನಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬೋಟಿಂಗ್, ಕಯಾಕಿಂಗ್, ಬನಾನಾ ರೈಡ್, ಜೋರ್ಬಿಂಗ್ ಸೇರಿದಂತೆ ಇತರೆ ಜಲಕ್ರೀಡೆಗಳಿಗೆ ಅನುಮತಿ ನೀಡಬೇಕು ಎಂದು ಕೋರಲಾಗಿದೆ.

ಸೂಪಾ ಜಲಾಶಯದಿಂದ ನೀರು ಹೊರಬಿಡುವ ಕುರಿತು ಕೆ.ಪಿ.ಸಿ.ಎಲ್. ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆ ಇರುವುದರಿಂದ, ಅಂತಹ ಸಂದರ್ಭಗಳಲ್ಲಿ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್ಲಾ ಜಲಕ್ರೀಡೆಗಳನ್ನು ಸ್ಥಗಿತಗೊಳಿಸುವುದಾಗಿ ಸಂಘ ಭರವಸೆ ನೀಡಿದೆ.

ಇದನ್ನೂ ಓದಿ: ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

ದಾಂಡೇಲಿಯ ವಿಶೇಷ ಪರಿಸ್ಥಿತಿ, ಸ್ಥಳೀಯರ ಉದ್ಯೋಗ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆದಾರರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಮರುಪರಿಶೀಲಿಸಿ ರಾಫ್ಟಿಂಗ್ ಹೊರತುಪಡಿಸಿ ಉಳಿದ ಜಲಕ್ರೀಡೆಗಳಿಗೆ ಶರತ್ತುಬದ್ಧ ಅನುಮತಿ ನೀಡಬೇಕೆಂದು ರೆಸಾರ್ಟ್ ಮಾಲೀಕರ ಸಂಘ ಮನವಿ ಮಾಡಿದೆ.