SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ನಗರಸಭೆಯ ಜಮೀನಿನಲ್ಲಿ ಅತಿಕ್ರಮಣ ಆರೋಪ: ಸಾರ್ವಜನಿಕರ ಆಕ್ರೋಶ

ನಗರಸಭೆಯ ಜಮೀನಿನಲ್ಲಿ ಅತಿಕ್ರಮಣ ಆರೋಪ: ಸಾರ್ವಜನಿಕರ ಆಕ್ರೋಶ

0
158

ದಾಂಡೇಲಿ: ದಾಂಡೇಲಿನಗರದ ಅಂಬೇವಾಡಿಯ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಬೆಲೆಬಾಳುವ ಜಮೀನಿನಲ್ಲಿ ಅತಿಕ್ರಮಣ ನಡೆಸಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ಹಾಗೂ ನಗರಸಭೆಯ ಮಾಜಿ ಸದಸ್ಯರು ಮತ್ತು ಮಾಜಿ ಉಪಾಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿಕ್ರಮಣ ನಡೆಸುತ್ತಿರುವ ವ್ಯಕ್ತಿ ನಗರಸಭೆಯ ಪೌರಾಯುಕ್ತರ ವಾಹನದ ಗುತ್ತಿಗೆ ಆಧಾರಿತ ಚಾಲಕನಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪೌರಾಯುಕ್ತರು ಹಾಗೂ ಕಚೇರಿ ವ್ಯವಸ್ಥಾಪಕರ ಬೆಂಬಲದಿಂದ ಯಾವುದೇ ಅಧಿಕೃತ ಅನುಮತಿ ಅಥವಾ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳ ಕುರಿತು ನಗರಸಭೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಇದೇ ವೇಳೆ ಸುಭಾಸ ನಗರದ ಸಾರ್ವಜನಿಕ ಶೌಚಾಲಯದ ಸಮೀಪವೂ ಅತಿಕ್ರಮಣ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದು, ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ನಗರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದಾರೆ. ಆದರೂ ಈ ಅತಿಕ್ರಮಣ ಪ್ರಕರಣಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಗರಾಭಿವೃದ್ಧಿ ಕೋಶಕ್ಕೂ ಮಾಹಿತಿ ನೀಡಲಾಗಿದ್ದರೂ ಕ್ರಮವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.