SK Home Ad
Home ನಮ್ಮ ಜಿಲ್ಲೆ ರಾಯಚೂರು ಭೀಕರ ದುರಂತ: ಕಟ್ಟಡದ ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳ ಸಾವು

ಭೀಕರ ದುರಂತ: ಕಟ್ಟಡದ ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳ ಸಾವು

0
62

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಸಮೀಪ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಕಟ್ಟಡವೊಂದರ ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ನಾಗರಾಜ ಕ್ಯಾದಿಗೇರಾ (22), ರವಿಕುಮಾರ ಸಮುದ್ರ (21) ಹಾಗೂ ಅರ್ಜುನ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: SIR ಆತಂಕವೇ: ಜೂನ್‌ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ

ಗಾಯಗೊಂಡಿರುವ ಪ್ರಭು ಮಾತ್ಪಳ್ಳಿ, ಅಭಿಷೇಕ್ ಹೆಚ್.ಎನ್. ತಾಂಡ ಹಾಗೂ ಉಮೇಶ ಕರಿಗುಡ್ಡ ಅವರನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ಮಾಹಿತಿ ಪ್ರಕಾರ, ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾಜಿದ್ ಎಂಬುವರಿಗೆ ಸೇರಿದ ಕಟ್ಟಡದ ಮೇಲ್ಛಾವಣಿ ಏಕಾಏಕಿ ಕುಸಿದು ಈ ದುರಂತ ಸಂಭವಿಸಿದೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ: ಸೂಪಾ ಜಲಾಶಯ ಖಾಲಿ ಖಾಲಿ: ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು

ವಿದ್ಯಾರ್ಥಿಗಳು ಕಿರುಚಿತ್ರವೊಂದರ ಪೋಸ್ಟರ್‌ಗಳನ್ನು ವೀಕ್ಷಿಸುತ್ತಾ ಕಟ್ಟಡದ ಛಾವಣಿಯ ಕೆಳಭಾಗದಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದಿದೆ ಎಂದು ತಿಳಿದುಬಂದಿದೆ. ಪರಿಣಾಮ ಕೆಲವರು ಅವಶೇಷಗಳಡಿ ಸಿಲುಕಿಕೊಂಡಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ: ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು

ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಪಿಐ ಮಂಜುನಾಥ, ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ಕರೇಮ್ಮ ಜಿ. ನಾಯಕ ಹಾಗೂ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡ ಕುಸಿತಕ್ಕೆ ಕಾರಣಗಳ ಕುರಿತು ತನಿಖೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಸಾವಿನಿಂದ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.