SK Home Ad
Home ನಮ್ಮ ಜಿಲ್ಲೆ ರಾಯಚೂರು DJ ಸೌಂಡ್‌ನಿಂದ ಮಗಳಿಗೆ ಅನಾರೋಗ್ಯ ಆರೋಪ: ಮಧ್ಯರಾತ್ರಿ ಮಗಳನ್ನು ಎತ್ತಿಕೊಂಡು DC ಮನೆ ಎದುರು ಪ್ರತಿಭಟನೆ

DJ ಸೌಂಡ್‌ನಿಂದ ಮಗಳಿಗೆ ಅನಾರೋಗ್ಯ ಆರೋಪ: ಮಧ್ಯರಾತ್ರಿ ಮಗಳನ್ನು ಎತ್ತಿಕೊಂಡು DC ಮನೆ ಎದುರು ಪ್ರತಿಭಟನೆ

0
88
ಡಿ.ಜೆ ಸೌಂಡ್ ವಿರುದ್ಧ ಮಧ್ಯರಾತ್ರಿ ಪ್ರತಿಭಟನೆ: ಮಗಳನ್ನು ಎತ್ತಿಕೊಂಡು ಡಿಸಿ ಕಚೇರಿಗೆ ಬಂದ ಬಿಎಸ್‌ಪಿ ಜಿಲ್ಲಾಧ್ಯಕ್ಷ

ರಾಯಚೂರು: ಡಿ.ಜೆ ಸೌಂಡ್‌ನಿಂದ ತಮ್ಮ ಚಿಕ್ಕ ಮಗಳ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ ಅವರು ಮಗಳನ್ನು ಎತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ನಗರದ ಗೋಲ್ ಮಾರ್ಕೆಟ್ ಬಡಾವಣೆಯ ನಿವಾಸಿಯಾಗಿರುವ ಜೈಭೀಮ್ ವಲ್ಲಭ ಅವರು ರಾತ್ರಿ ಸುಮಾರು 2 ಗಂಟೆ ವೇಳೆಗೆ ತಮ್ಮ ಮಗಳನ್ನು ಎತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಆಗಮಿಸಿ ಡಿ.ಜೆ ಸೌಂಡ್ ಬಳಕೆಯನ್ನು ನಿಯಂತ್ರಿಸುವಂತೆ ಆಗ್ರಹಿಸಿದರು.

ಡಿ.ಜೆ ಸೌಂಡ್‌ಗೆ ಸಂಬಂಧಿಸಿದಂತೆ ಪೊಲೀಸರು ನಿರ್ಬಂಧದ ಆದೇಶ ನೀಡಿದ್ದರೂ, ಅದನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ನಿರಂತರವಾಗಿ ಜೋರಾಗಿ ಧ್ವನಿವರ್ಧಕ ಹಾಗೂ ಡಿ.ಜೆ ಸೌಂಡ್ ಬಳಕೆಯಿಂದ ಚಿಕ್ಕ ಮಕ್ಕಳು, ವಯೋವೃದ್ಧರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.

ತಮ್ಮ ಮಗಳಿಗೂ ಡಿ.ಜೆ ಸೌಂಡ್‌ನಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಮಕ್ಕಳ ಆರೋಗ್ಯಕ್ಕಿಂತ ನಿದ್ರೆ ಮುಖ್ಯವೇ?’ : ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ರಾತ್ರಿ ವೇಳೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಸಾಧ್ಯವಿಲ್ಲ. ಬೆಳಗ್ಗೆ ಈ ಕುರಿತು ಮಾತನಾಡಬಹುದು ಎಂದು ಜೈಭೀಮ್ ವಲ್ಲಭ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಕ್ಕಳ ಆರೋಗ್ಯಕ್ಕಿಂತ ಜಿಲ್ಲಾಧಿಕಾರಿಯವರ ನಿದ್ರೆಯೇ ಮುಖ್ಯವಾಗಿದೆಯೇ? ಎಂದು ಪ್ರಶ್ನಿಸಿದರು. ಸಮಸ್ಯೆ ಬಗೆಹರಿಯುವವರೆಗೆ ಬೆಳಗ್ಗಿನವರೆಗೂ ಜಿಲ್ಲಾಧಿಕಾರಿ ಕಚೇರಿ ಎದುರೇ ಇರುವುದಾಗಿ ಪಟ್ಟು ಹಿಡಿದರು.

ಈ ವೇಳೆ ಪೊಲೀಸರು ಅವರನ್ನು ಸಮಾಧಾನಪಡಿಸಿ, ಮಗಳ ಆರೋಗ್ಯವನ್ನು ಪರಿಶೀಲಿಸಲು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹಾಗೂ ಬೆಳಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿಸುವುದಾಗಿ ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಮನವೊಲಿಸಿದರು.

ಡಿ.ಜೆ ಹಾಗೂ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮಗಳ ಪಾಲನೆ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಸ್ಥಳೀಯ ಮಟ್ಟದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.

ಮಗಳ ಆರೋಗ್ಯದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಜಿಲ್ಲಾಧಿಕಾರಿ ಕಚೇರಿ ಎದುರು ತಂದೆಯೊಬ್ಬರು ನಡೆಸಿದ ಪ್ರತಿಭಟನೆ ಇದೀಗ ಗಮನ ಸೆಳೆದಿದ್ದು, ಡಿ.ಜೆ ಸೌಂಡ್ ಬಳಕೆಯ ನಿಯಂತ್ರಣದ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.