SK Home Ad
Home ನಮ್ಮ ಜಿಲ್ಲೆ ರಾಯಚೂರು ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ರೈಲಿಗೆ ತಲೆಕೊಟ್ಟ ಪತಿ

ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ರೈಲಿಗೆ ತಲೆಕೊಟ್ಟ ಪತಿ

0
95

ರಾಯಚೂರು: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಬಳಿಕ ಪತಿ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಲಾಲನಗರ ಬಡಾವಣೆಯಲ್ಲಿ ಭಾನುವಾರ ಬೆಳಕಿಗೆ ಬಂದಿದೆ.

ಜಲಾಲನಗರ ನಿವಾಸಿಗಳಾದ ಅರುಣಾ (36), ಪುತ್ರ ಶ್ಲೋಕ (10) ಹಾಗೂ ಪುತ್ರಿ ಖುಷಿ (4) ಕೊಲೆಯಾದವರು. ಪತಿ ವಿಷ್ಣು (45) ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಷ್ಣು ಅವರು ಪತ್ನಿ ಹಾಗೂ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಾಂತವೀರ ನೇತೃತ್ವದ ಪೊಲೀಸ್ ತಂಡ ಮೃತರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಾರ್ಕೆಟ್ ಯಾರ್ಡ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.