SK Home Ad
Home ನಮ್ಮ ಜಿಲ್ಲೆ ಧಾರವಾಡ SIR ಆತಂಕವೇ: ಜೂನ್‌ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ

SIR ಆತಂಕವೇ: ಜೂನ್‌ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ

0
77

ಹುಬ್ಬಳ್ಳಿ: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ, ಆತಂಕ ಮತ್ತು ಅನುಮಾನಗಳಿಗೆ ತೆರೆ ಎಳೆಯುವ ಉದ್ದೇಶದಿಂದ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ವಿಶೇಷ ಫೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್‌. ಸ್ನೇಹಲ್‌ ಅವರು ಇದೇ ಜೂನ್‌ 30ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನೇರವಾಗಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಕುರಿತಂತೆ ಹಲವು ರೀತಿಯ ಗಾಳಿಸುದ್ದಿಗಳು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೊಂದಲಕಾರಿ ಮಾಹಿತಿಗಳು ಜನರಲ್ಲಿ ಭಯದ ವಾತಾವರಣ ನಿರ್ಮಿಸಿವೆ. ವಿಶೇಷವಾಗಿ, ಎಸ್‌ಐಆರ್‌ ನಂತರ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಲಾಗುತ್ತದೆಯೇ ಎಂಬ ಪ್ರಶ್ನೆ ಬಹುತೇಕರಲ್ಲಿ ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ, ಮತದಾರರಿಗೆ ಎಸ್‌ಐಆರ್‌ನ ನಿಜವಾದ ಉದ್ದೇಶ, ಅದರ ಕಾನೂನಾತ್ಮಕ ಹಿನ್ನೆಲೆ ಮತ್ತು ಪ್ರಕ್ರಿಯೆಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಫೋನ್‌ ಇನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಎಸ್‌ಐಆರ್‌ (SIR) ಎಂದರೇನು? : ಎಸ್‌ಐಆರ್‌ (Special Intensive Revision) ಎಂದರೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ. ಚುನಾವಣಾ ಆಯೋಗವು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿ, ನಕಲಿ, ಮೃತ ಅಥವಾ ಸ್ಥಳಾಂತರಗೊಂಡಿರುವ ವ್ಯಕ್ತಿಗಳ ಹೆಸರುಗಳನ್ನು ಗುರುತಿಸಿ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಳ್ಳುತ್ತದೆ.

ಚುನಾವಣಾ ಆಯೋಗದ ಪ್ರಕಾರ, ಇದು ಸಂಪೂರ್ಣವಾಗಿ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಇದೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. 2002ರಲ್ಲಿಯೇ ದೇಶದ ವಿವಿಧ ಭಾಗಗಳಲ್ಲಿ ಇಂತಹ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗಿದೆ. ಇತ್ತೀಚೆಗೆ ಕೆಲ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಕುರಿತು ನ್ಯಾಯಾಂಗದ ಮೆಟ್ಟಿಲೇರಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಜನರಲ್ಲಿ ಹೆಚ್ಚುತ್ತಿರುವ ಆತಂಕ : ಎಸ್‌ಐಆರ್‌ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಸರ್ಕಾರದ ವಿವಿಧ ಯೋಜನೆಗಳು, ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರೆ ಸೌಲಭ್ಯಗಳ ಮೇಲೂ ಪರಿಣಾಮ ಬೀರುವುದೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಅಲ್ಲದೇ, ಹಲವು ವರ್ಷಗಳಿಂದ ಮತ ಚಲಾಯಿಸುತ್ತಿದ್ದರೂ ಈಗ ತಮ್ಮ ಹೆಸರೇ ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಇದರ ಜೊತೆಗೆ, 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇತ್ತೋ ಇಲ್ಲವೋ ಎಂಬ ಮಾಹಿತಿ ಇಲ್ಲದವರು, ದಶಕಗಳ ಹಿಂದಿನ ದಾಖಲೆಗಳನ್ನು ಎಲ್ಲಿಂದ ಪಡೆಯಬೇಕು, ದಾಖಲೆಗಳು ಅಪೂರ್ಣವಾಗಿದ್ದರೆ ಏನಾಗುತ್ತದೆ, ಮನೆಗೆ ಭೇಟಿ ನೀಡುವ ಬಿಎಲ್‌ಒಗಳು ಯಾವ ದಾಖಲೆಗಳನ್ನು ಕೇಳುತ್ತಾರೆ ಎಂಬ ಗೊಂದಲವೂ ಸಾರ್ವಜನಿಕರಲ್ಲಿ ಇದೆ.

ಫೋನ್‌ ಇನ್‌ನಲ್ಲಿ ಏನೆಲ್ಲ ಪ್ರಶ್ನೆ ಕೇಳಬಹುದು? : ಕಾರ್ಯಕ್ರಮದಲ್ಲಿ ಸಾರ್ವಜನಿಕರು ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಬಗೆಯ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಅವುಗಳಲ್ಲಿ ಎಸ್‌ಐಆರ್‌ಗೆ ಅಗತ್ಯ ದಾಖಲೆಗಳು ಯಾವುವು?, ಹಳೆಯ ದಾಖಲೆಗಳು ಲಭ್ಯವಿಲ್ಲದಿದ್ದರೆ ಏನು ಮಾಡಬೇಕು?, ತಾತ್ಕಾಲಿಕ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸೇರಿಸಿಕೊಳ್ಳುವ ಪ್ರಕ್ರಿಯೆ ಏನು?, ಅಂತಿಮ ಪಟ್ಟಿಯಲ್ಲಿ ಹೆಸರು ಕೈಬಿಟ್ಟರೆ ಮರು ಸೇರ್ಪಡೆ ಹೇಗೆ?, ಎಸ್‌ಐಆರ್‌ನಿಂದ ಪೌರತ್ವಕ್ಕೆ ಯಾವುದೇ ಅಪಾಯವಿದೆಯೇ?, ಮತದಾರರ ಪಟ್ಟಿಯಿಂದ ಹೆಸರು ಅಳಿಸಿದರೆ ಸರ್ಕಾರದ ಸೌಲಭ್ಯಗಳ ಮೇಲೆ ಪರಿಣಾಮ ಬೀರುವುದೇ?, ದಾಖಲೆಗಳ ಕೊರತೆಯಿಂದ ಹೆಸರು ಕೈಬಿಟ್ಟರೆ ಮುಂದಿನ ಕ್ರಮವೇನು? ಈ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ನೇರವಾಗಿ ಉತ್ತರಿಸಲಿದ್ದು, ಜನರಲ್ಲಿರುವ ಅನಗತ್ಯ ಆತಂಕಗಳನ್ನು ದೂರ ಮಾಡುವ ಪ್ರಯತ್ನ ನಡೆಯಲಿದೆ.

SIR ವೇಳಾಪಟ್ಟಿ : ಎಸ್‌ಐಆರ್‌ ಆರಂಭ: ಜೂನ್‌ 30, 2026, ಎಸ್‌ಐಆರ್‌ ಅಂತ್ಯ: ಜುಲೈ 29, 2026, ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್‌ 5, 2026,
ಆಕ್ಷೇಪಣೆ ಸಲ್ಲಿಕೆ ಅವಧಿ: ಆಗಸ್ಟ್‌ 5ರಿಂದ ಸೆಪ್ಟೆಂಬರ್‌ 4ರವರೆಗೆ, ಆಕ್ಷೇಪಣೆಗಳ ವಿಲೇವಾರಿ: ಸೆಪ್ಟೆಂಬರ್‌ 5ರಿಂದ ಅಕ್ಟೋಬರ್‌ 3ರವರೆಗೆ, ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್‌ 7, 2026

ಸಾರ್ವಜನಿಕರು ಜೂನ್‌ 30ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ 99020 98730 ಮತ್ತು 99165 91157 ಸಂಖ್ಯೆಗೆ ಕರೆ ಮಾಡಿ ತಮ್ಮ ಅನುಮಾನಗಳಿಗೆ ಸ್ಪಷ್ಟನೆ ಪಡೆಯಬಹುದಾಗಿದೆ.