ಬೆಂಗಳೂರು: ಯಲಹಂಕ ಹಾಗೂ ಉತ್ತರ ಬೆಂಗಳೂರಿನ ಸಾವಿರಾರು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ರೈಲು ಸಂಖ್ಯೆ 11013/11014 ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ)–ಕೊಯಮತ್ತೂರು–ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ಯಲಹಂಕ ರೈಲು ನಿಲ್ದಾಣದಲ್ಲೂ ಅಧಿಕೃತವಾಗಿ ನಿಲುಗಡೆಯಾಗಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಸಾರ್ವಜನಿಕರ ಪ್ರಮುಖ ಬೇಡಿಕೆಯೊಂದು ಇದೀಗ ಈಡೇರಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ಯಲಹಂಕವು ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿನ ಸಾವಿರಾರು ದಿನನಿತ್ಯದ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಕುಟುಂಬಗಳು ಮುಂಬೈ ಮತ್ತು ಕೊಯಮತ್ತೂರು ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಈ ರೈಲಿಗೆ ಯಲಹಂಕದಲ್ಲಿ ನಿಲುಗಡೆ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ತಮ್ಮ ನಿರಂತರ ಪ್ರಯತ್ನ ಹಾಗೂ ಸತತ ಫಾಲೋ-ಅಪ್‌ನ ಫಲವಾಗಿ ನೈಋತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಶಿಫಾರಸು ಮಾಡಿದ್ದು, ಇದೀಗ ರೈಲ್ವೆ ಮಂಡಳಿಯು ಯಲಹಂಕದಲ್ಲಿ ಹೆಚ್ಚುವರಿ ನಿಲುಗಡೆಗೆ ಅಧಿಕೃತ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೂಪಾ ಜಲಾಶಯ ಖಾಲಿ ಖಾಲಿ: ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು
ಈ ಹೊಸ ನಿಲುಗಡೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿರುವ ಸಂಸದರು, ಸಾರ್ವಜನಿಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಹೊಸ ನಿಲುಗಡೆಯಿಂದ ಉತ್ತರ ಬೆಂಗಳೂರಿನ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ರೈಲು ನಿಲ್ದಾಣದವರೆಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದೆ. ಇದರಿಂದ ಸಮಯ ಮತ್ತು ಪ್ರಯಾಣ ವೆಚ್ಚ ಉಳಿತಾಯವಾಗುವುದರ ಜೊತೆಗೆ ನಗರದ ಸಂಚಾರ ದಟ್ಟಣೆ ತಗ್ಗಿಸುವಲ್ಲಿಯೂ ನೆರವಾಗುವ ನಿರೀಕ್ಷೆಯಿದೆ.
ಉತ್ತಮ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಸ್ನೇಹಿ ಯೋಜನೆಗಳ ಮೂಲಕ ವಿಕಸಿತ ಯಲಹಂಕ, ವಿಕಸಿತ ಬೆಂಗಳೂರು ಹಾಗೂ ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣಕ್ಕೆ ತಮ್ಮ ಬದ್ಧತೆ ನಿರಂತರವಾಗಿರಲಿದೆ ಎಂದು ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.






















